ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡ್ರಗ್ ಪೆಡ್ಲರ್ ಅಂತ ಬೆದರಿಕೆ ಹಾಕಿ, ಸ್ನೇಹಿತನನ್ನೇ ಅಪಹರಿಸಿ ಲಕ್ಷಾಂತರ ಸುಲಿಗೆ

ಬೆಂಗಳೂರು: ಸಮೋಸ ಬಿಸಿನೆಸ್ ಪಾರ್ಟ್ನರ್ ತನ್ನ ಸ್ನೇಹಿತನನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿರೋ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ದೂರು ನೀಡಿದರೆ ಡ್ರಗ್ ಪೆಡ್ಲರ್ ಎಂದು ಸಿಕ್ಕಿಹಾಕಿಸುವುದಾಗಿ ಬೆದರಿಕೆ ಹಾಕಿರುವ ಆಘಾತಕಾರಿ ಅಂಶವೂ ಈ ಪ್ರಕರಣದಲ್ಲಿ ಬಯಲಾಗಿದೆ.

ಕಾಲೇಜಿನಲ್ಲಿ ಸೀನಿಯರ್ ಆಗಿದ್ದ ನಿತಿನ್ ಗೌಡ ಮತ್ತು ಜೂನಿಯರ್ ಆಗಿದ್ದ ನಿಹಾರ್, ಇಬ್ಬರೂ ಸಮೋಸ ಫ್ಯಾಕ್ಟರಿ ಹೆಸರಿನಲ್ಲಿ ಬಿಸಿನೆಸ್ ಮಾಡುತ್ತಿದ್ದರು. ಈ ವೇಳೆ ನಿಹಾರ್, ನಿತಿನ್‌ನಿಂದ 5 ಸಾವಿರ ರೂಪಾಯಿ ಸಾಲ ಪಡೆದಿದ್ದ. ಸುಮಾರು 20 ದಿನಗಳಾದರೂ ಹಣ ಹಿಂದಿರುಗಿಸದೆ, ನಿತಿನ್‌ನ 150ಕ್ಕೂ ಹೆಚ್ಚು ಕರೆಗಳನ್ನು ನಿಹಾರ್ ಸ್ವೀಕರಿಸಿರಲಿಲ್ಲ. ಕೊನೆಗೆ ಹಣ ಹಿಂದಿರುಗಿಸುವುದಾಗಿ ಹೇಳಿ, ನಿತೀನ್‌ನನ್ನು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕರೆಸಿಕೊಂಡಿದ್ದ. ಕೇವಲ 5 ಸಾವಿರ ರೂಪಾಯಿ ವಾಪಸ್ ಪಡೆಯುವ ಆಸೆಯಿಂದ ಬಂದ ನಿತಿನ್, ಕೊನೆಗೆ ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿತೀನ್ ಕರೆದ ಸ್ಥಳಕ್ಕೆ ಬಂದಾಗ, ನಿಹಾರ್ ತನ್ನ ಮೂವರು ಸಹಚರರೊಂದಿಗೆ ಆಟೋದಲ್ಲಿ ಬಂದಿದ್ದ. ಅಲ್ಲಿ ನಿತಿನ್‌ನ ಪ್ಯಾಂಟ್ ಹಿಡಿದು ಬಲವಂತವಾಗಿ ಅದೇ ಆಟೋದಲ್ಲಿ ಕೂರಿಸಿಕೊಂಡು ಅಪಹರಣ ಮಾಡಿದರು. ನಂತರ ಜೆಪಿ ನಗರದ ಕೊತ್ತನೂರು ದಿಣ್ಣೆ ಬಳಿಯ ಸ್ಮಶಾನಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ, ನಿತಿನ್‌ ಯುಪಿಐ ಪಾಸ್‌ ವರ್ಡ್ ಪಡೆದು ಖಾತೆಯಿಂದ 47 ಸಾವಿರ ರೂಪಾಯಿಗಳನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ, ನಿತಿನ್ ಕುತ್ತಿಗೆಯಲ್ಲಿದ್ದ ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ಕಸಿದುಕೊಂಡಿದ್ದಾರೆ.

ಸುಲಿಗೆ ಮಾಡಿದ ನಂತರವೂ ಆರೋಪಿಗಳ ಕ್ರೌರ್ಯ ನಿಲ್ಲಲಿಲ್ಲ. ನಿತಿನ್ ಕೈಗೆ ಡ್ರಗ್ಸ್ ಇಟ್ಟುಕೊಂಡು ವಿಡಿಯೋ ಮಾಡಿದ್ದಾರೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ, ಈ ವಿಡಿಯೋವನ್ನು ವೈರಲ್ ಮಾಡಿ ನಿನ್ನನ್ನು ಡ್ರಗ್ ಪೆಡ್ಲರ್ ಎಂದು ಸಿಕ್ಕಿಹಾಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಭಯಭೀತನಾದ ನಿತಿನ್ ಗೌಡ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಬನಶಂಕರಿ ಠಾಣೆಯ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಪ್ರಕರಣದ ಕುರಿತು ಮಾಹಿತಿ ನೀಡಿದ ಡಿಸಿಪಿ ಲೋಕೇಶ್ ಜಗಲಾಸರ್, ಬಂಧಿತ ಆರೋಪಿಗಳು ಮಾದಕ ವಸ್ತುಗಳ ಸೇವನೆ ಮತ್ತು ಡ್ರಗ್ ಪೆಡ್ಲಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ. ಆರೋಪಿಗಳು ಡ್ರಗ್ಸ್ ಎಲ್ಲಿಂದ ತಂದರು ಮತ್ತು ಅವರ ಜಾಲದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.

Edited By : Manjunath H D
PublicNext

PublicNext

03/02/2026 12:55 pm

Cinque Terre

11.26 K

Cinque Terre

0

ಸಂಬಂಧಿತ ಸುದ್ದಿ