ಹಾಸನ: ಕೇವಲ ಏಳು ಸಾವಿರ ರೂಪಾಯಿ ಹಣಕಾಸಿನ ವಿಚಾರಕ್ಕೆ ಉಂಟಾದ ವೈಮನಸ್ಸು ಯುವಕನೊಬ್ಬನ ಕ್ರೂರ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ವರುಣ್ ಕೆ.ಎಂ ಎಂದು ಗುರುತಿಸಲಾಗಿದೆ. ಹಣಕಾಸಿನ ವಿಚಾರವಾಗಿ ಪ್ರಮುಖ ಆರೋಪಿ ಶಶಾಂಕ್ ಹಾಗೂ ವರುಣ್ ನಡುವೆ ಕಿರಿಕ್ ನಡೆದಿತ್ತು. ಮಾರ್ಚ್ 10ರಂದು ಬೈಕ್ ರಿಪೇರಿಗೆಂದು ಹೋದ ವರುಣ್ ಮತ್ತು ಆತನ ಸ್ನೇಹಿತ ಲೋಹಿತ್‌ನನ್ನು ದುಷ್ಕರ್ಮಿಗಳು ಅಪಹರಿಸಿ ಹಂಗರಹಳ್ಳಿಯ ತೋಟದ ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದರು. ಮಾರ್ಚ್ 11ರಂದು ಲೋಹಿತ್ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರೂ, ಅಷ್ಟರಲ್ಲೇ ತೀವ್ರ ಹಲ್ಲೆಯಿಂದ ವರುಣ್ ಸಾವನ್ನಪ್ಪಿದ್ದರು.
ಹತ್ಯೆಯ ನಂತರ ಆರೋಪಿಗಳು ಮೃತದೇಹವನ್ನು ಗುಂಡೇಗೌಡನಕೊಪ್ಪಲಿಗೆ ಸಾಗಿಸಿ, ಎರಡು ದಿನಗಳ ಕಾಲ ಕೊಠಡಿಯೊಂದರಲ್ಲಿ ಇರಿಸಿ ಬಳಿಕ ಸುಟ್ಟು ಹಾಕಿದ್ದರು. ಮಾರ್ಚ್ 19ರಂದು ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ನಂತರ ಪ್ರಕರಣದ ಗಂಭೀರತೆ ಬೆಳಕಿಗೆ ಬಂದಿದೆ. ಸತೀಶ್, ಉಮರ್, ವಿಜಯ ನಾಯಕ್, ಚೇತನ್ ಮತ್ತು ಮನು ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಶಶಾಂಕ್ ಸೇರಿದಂತೆ ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.
ಆರೋಪಿಗಳ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದಿದ್ದರೂ, ಗಾಂಜಾ ಸೇವನೆಯ ಚಟ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ ತಿಳಿಸಿದ್ದಾರೆ.
PublicNext
23/03/2026 06:50 pm