ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಹತ್ವದ ಸಭೆ :ಡಿಸಿ ಅವರನ್ನು ಸನ್ಮಾನಿಸಿದ ರೆಸಾರ್ಟ್,ಹೋಂಸ್ಟೇ ಮಾಲೀಕರು

ಸಕಲೇಶಪುರ: ಸಕಲೇಶಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಬೆಟ್ಟದ ಬೈರವೇಶ್ವರಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿ, ಪ್ರವಾಸೋದ್ಯಮ ಉತ್ತೇಜನ ಮತ್ತು ಸುರಕ್ಷತೆ ಕುರಿತು ಮಹತ್ವದ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ದೇವಾಲಯದಲ್ಲಿ ಫೋಟೋಶೂಟ್‌ಗೆ ನಿಯಮಾವಳಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ದೇವಾಲಯಕ್ಕೆ ಭೇಟಿ ನೀಡಿ ಸ್ಥಳೀಯ ಗ್ರಾಮಸ್ಥರೊಂದಿಗೆ ಚರ್ಚಿಸಿದ ಬಳಿಕ, ಹಾನುಬಾಳು ಗ್ರಾಮದ Pebbles & Beans Resort ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರೊಂದಿಗೆ ಸಭೆ ನಡೆಸಿದರು.

ಬೆಟ್ಟದ ಬೈರವೇಶ್ವರಸ್ವಾಮಿ ದೇವಾಲಯದಲ್ಲಿ ಫೋಟೋಶೂಟ್ ನಡೆಸಲು ಇನ್ನುಮುಂದೆ 4 ಗಂಟೆಗಳ ಅವಧಿಗೆ ₹5,000 ಶುಲ್ಕ ವಿಧಿಸಲಾಗುವುದು. ಫೋಟೋಶೂಟ್ ಮಾಡಲು ಮುಂಚಿತವಾಗಿ ಆನ್‌ಲೈನ್ ಮೂಲಕ ಅನುಮತಿ ಪಡೆಯಬೇಕು. ನಿಗದಿತ ಸಮಯ ಮೀರಿದಲ್ಲಿ ಪ್ರತಿ ಹೆಚ್ಚುವರಿ ಗಂಟೆಗೆ ₹1,000 ಶುಲ್ಕ ವಿಧಿಸಲಾಗುತ್ತದೆ.

ದೇವಾಲಯ ಆವರಣದಲ್ಲಿ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು; ನಿಯಮ ಉಲ್ಲಂಘಿಸಿದರೆ ₹2,500 ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

18 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಕರೆತಂದಲ್ಲಿ ತಕ್ಷಣ ವಿಚಾರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ಅಪ್ರಾಪ್ತ ವಯಸ್ಕರಿಗೆ ಹೋಂಸ್ಟೇ ಅಥವಾ ರೆಸಾರ್ಟ್‌ಗಳಲ್ಲಿ ವಸತಿ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ಡಿವೈಎಸ್‌ಪಿ ಎಸ್.ಕೆ. ಮಾಲ್ತೇಶ್, ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಪಿ. ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.

ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಮಸ್ತಾರೇ ಲೋಕೇಶ್, ಕಾರ್ಯದರ್ಶಿ ಹರೀಶ್, ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯ ಅಂತ್ಯದಲ್ಲಿ ರೆಸಾರ್ಟ್ ಹಾಗೂ ಹೋಂಸ್ಟೇ ಮಾಲೀಕರು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರನ್ನು ಸನ್ಮಾನಿಸಿ ಗೌರವಿಸಿದರು.

Edited By :
PublicNext

PublicNext

01/04/2026 05:48 pm

Cinque Terre

13.67 K

Cinque Terre

0