ಹಾಸನ :ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸಂಸದ ಶ್ರೇಯಸ್ ಪಟೇಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಅಧಿವೇಶನದಲ್ಲಿ ಗಮನ ಸೆಳೆದ ಅವರು, ಅತಿವೃಷ್ಟಿಯಿಂದ ಹಲವು ರೀತಿಯ ಬೆಳೆ ಹಾಳಾಗಿವೆ. ಹಾಗೆಯೇ ಬರುವ ಜೂನ್‌ನಲ್ಲಿ ಮುಂಗಾರು ಆರಂಭ ಆಗಲಿದ್ದು, ಅದಕ್ಕೆ ಬೇಕಾದ ಸಮರ್ಪಕ ರಸಗೊಬ್ಬರ, ಬಿತ್ತನೆ ಬೀಜ ಪೂರೈಸುವಂತೆ ಮನವಿ ಮಾಡಿದರು.
ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧.೮ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದ್ದು, ವಾಣಿಜ್ಯ ಬೆಳೆಗೆ ವಿವಿಧ ರೋಗ ಕಾಣಿಸಿಕೊಂಡಿದೆ. ತೆಂಗು ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ತೆಂಗು ಬೆಳೆಯನ್ನು ಸಸ್ಯ ಸಂರಕ್ಷಣಾ ಯೋಜನೆಗೆ ಸೇರ್ಪಡೆ ಮಾಡಬೇಕು. ಪ್ರಯೋಗಾಲಯ ಉನ್ನತೀಕರಣಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಮುಂದುವರಿದು ಹಾಸನ ಜಿಲ್ಲೆಯ ೧.೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಅದರಲ್ಲಿ ಕೆಲವು ಭಾಗ ಬಿಳಿಸುಳಿ ರೋಗಕ್ಕೆ ಒಳಗಾಗಿದ್ದು, ಅದಕ್ಕೂ ಸೂಕ್ತ ಪರಿಹಾರ ಕೊಡಬೇಕು ಎಂದು ವಿನಂತಿಸಿದರು.
ಜಿಲ್ಲೆಯಲ್ಲಿ ರಾಜಮುಡಿ ಭತ್ತವನ್ನು ಬೆಳೆಯಲಿದ್ದು, ಆ ಅಕ್ಕಿಗೆ ಉತ್ತಮ ಬೇಡಿಕೆ ಮತ್ತು ರುಚಿಕರ ಎಂಬ ಮೆಚ್ಚುಗೆ ಪಡೆದಿದೆ. ಹಾಗಾಗಿ ಅದಕ್ಕೆ ಉತ್ತೇಜನ ನೀಡಬೇಕು ಎಂದು ಕೋರಿದರು.
Kshetra Samachara
02/04/2026 07:18 pm
LOADING...