ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕಛ್ ಮರುಭೂಮಿಯಲ್ಲಿ ಅಚ್ಚರಿ - ದಶಕದ ನಂತರ ಜನಿಸಿದ 'ಘೋರಾಡ್' ಮರಿ! 770 ಕಿ.ಮೀ ದೂರದಿಂದ ಬಂದಿತ್ತು ಮೊಟ್ಟೆ!

ಕಛ್ (ಗುಜರಾತ್): ಅಳಿವಿನ ಅಂಚಿನಲ್ಲಿರುವ ಭಾರತದ ಹೆಮ್ಮೆಯ ಪಕ್ಷಿ 'ಘೋರಾಡ್' (Great Indian Bustard) ಸಂತತಿಯನ್ನುಳಿಸಲು ವಿಜ್ಞಾನಿಗಳು ನಡೆಸಿದ ಸಾಹಸಮಯ ಕಾರ್ಯಾಚರಣೆಯೊಂದು ಕೊನೆಗೂ ಫಲ ನೀಡಿದೆ. ಗುಜರಾತ್‌ನ ಕಛ್ ಪ್ರದೇಶದಲ್ಲಿ ದಶಕದ ನಂತರ ಮೊದಲ ಬಾರಿಗೆ ಘೋರಾಡ್ ಮರಿಯೊಂದು ಜನಿಸುವ ಮೂಲಕ ವನ್ಯಜೀವಿ ಪ್ರಿಯರಲ್ಲಿ ಹೊಸ ಆಶಾವಾದ ಮೂಡಿಸಿದೆ.

ಕಛ್ ಪ್ರದೇಶದಲ್ಲಿ ಪ್ರಸ್ತುತ ಕೇವಲ ಮೂರು ಹೆಣ್ಣು ಘೋರಾಡ್ ಪಕ್ಷಿಗಳಿವೆ. ಆದರೆ ಒಂದೂ ಗಂಡು ಪಕ್ಷಿ ಇಲ್ಲದ ಕಾರಣ ಅಲ್ಲಿನ ಮೊಟ್ಟೆಗಳು ಫಲೀಕರಣಗೊಳ್ಳುತ್ತಿರಲಿಲ್ಲ (Infertile eggs). ಈ ಸಮಸ್ಯೆಯನ್ನು ನೀಗಿಸಲು ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂಸ್ಥೆ (WII) ಒಂದು ಮಾಸ್ಟರ್ ಪ್ಲಾನ್ ರೂಪಿಸಿದವು

ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸಂರಕ್ಷಣಾ ಕೇಂದ್ರದಿಂದ ಫಲೀಕರಣಗೊಂಡ ಮೊಟ್ಟೆಯೊಂದನ್ನು ಅತ್ಯಂತ ಜಾಗರೂಕತೆಯಿಂದ ಪೋರ್ಟಬಲ್ ಇನ್ಕ್ಯುಬೇಟರ್‌ನಲ್ಲಿ ಇರಿಸಲಾಯಿತು. ಈ ಮೊಟ್ಟೆಯನ್ನು ಹೊತ್ತ ವಾಹನವು ರಾಜಸ್ಥಾನದಿಂದ ಗುಜರಾತ್‌ವರೆಗೆ ಸತತ 19 ಗಂಟೆಗಳ ಕಾಲ ಯಾವುದೇ ಅಡೆತಡೆಯಿಲ್ಲದೆ (Halt-free corridor) 770 ಕಿ.ಮೀ ಪ್ರಯಾಣ ಬೆಳೆಸಿ ಕಛ್ ತಲುಪಿತು.

ಮಾರ್ಚ್ 22ರಂದು, ಕಛ್‌ನಲ್ಲಿದ್ದ ಹೆಣ್ಣು ಪಕ್ಷಿ ಇಟ್ಟಿದ್ದ 'ಫಲವತ್ತಲ್ಲದ' ಮೊಟ್ಟೆಯ ಜಾಗದಲ್ಲಿ ಈ 'ಫಲವತ್ತಾದ' ಮೊಟ್ಟೆಯನ್ನು ರಹಸ್ಯವಾಗಿ ಇರಿಸಲಾಯಿತು. ಆ ಹೆಣ್ಣು ಪಕ್ಷಿಯು ಇದನ್ನು ತನ್ನದೇ ಮೊಟ್ಟೆ ಎಂದು ಭಾವಿಸಿ ಕಾವು ಕೊಟ್ಟಿತು.

ಕೊನೆಗೂ ಮಾರ್ಚ್ 26ರಂದು ಆ ಮೊಟ್ಟೆಯೊಡೆದು ಪುಟಾಣಿ ಮರಿ ಹೊರಬಂದಿದೆ. ಇದು ಗುಜರಾತ್ ಅರಣ್ಯ ಇಲಾಖೆ ಮತ್ತು ರಾಜಸ್ಥಾನದ ನಡುವಿನ ಸಮನ್ವಯಕ್ಕೆ ಸಂದ ಜಯವಾಗಿದೆ. ರಾಜ್ಯ ಅರಣ್ಯ ಸಚಿವ ಅರ್ಜುನ್ ಮೋಧ್ವಾಡಿಯಾ ಅವರು ಈ ಸಾಧನೆಯನ್ನು ಶ್ಲಾಘಿಸಿದ್ದು, ಪ್ರಧಾನಿ ಮೋದಿಯವರ 2011ರ ದೂರದೃಷ್ಟಿಯ 'ಪ್ರಾಜೆಕ್ಟ್ ಜಿಐಬಿ'ಗೆ ಸಿಕ್ಕ ದೊಡ್ಡ ಯಶಸ್ಸು ಇದು ಎಂದಿದ್ದಾರೆ.

ಈ ಪುಟ್ಟ ಮರಿಯ ರಕ್ಷಣೆಗಾಗಿ ಸದ್ಯ ಅರಣ್ಯ ಇಲಾಖೆಯ 50 ಸಿಬ್ಬಂದಿ ದಿನದ 24 ಗಂಟೆಯೂ ಪಹರೆ ಕಾಯುತ್ತಿದ್ದಾರೆ. ಸುತ್ತಮುತ್ತಲಿನ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ನರಿ ಅಥವಾ ಇತರೆ ಪ್ರಾಣಿಗಳು ಮರಿಯ ಮೇಲೆ ದಾಳಿ ಮಾಡದಂತೆ ತೀವ್ರ ನಿಗಾ ಇರಿಸಲಾಗಿದೆ.

Edited By : Nagaraj Tulugeri
PublicNext

PublicNext

31/03/2026 08:35 pm

Cinque Terre

108.39 K

Cinque Terre

3