ಲಕ್ನೋ/ಕಾಸಗಂಜ್: ರಸ್ತೆಯಲ್ಲಿ ವಾಹನ ಚಲಾಯಿಸುವವರ ಅತಿವೇಗ ಮತ್ತು ಪೋಷಕರ ಒಂದು ಕ್ಷಣದ ನಿರ್ಲಕ್ಷ್ಯ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಕಾಸಗಂಜ್‌ನಲ್ಲಿ ನಡೆದ ಈ ಭೀಕರ ಅಪಘಾತವೇ ಸಾಕ್ಷಿ. ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಪುಟ್ಟ ಬಾಲಕಿಯೊಬ್ಬಳಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದ್ದು, ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ.
ಕಾಸಗಂಜ್‌ನ ಜನನಿಬಿಡ ರಸ್ತೆಯಲ್ಲಿ ಇಬ್ಬರು ಮಕ್ಕಳು ಯಾರೊಬ್ಬರ ಸಹಾಯವಿಲ್ಲದೆ ರಸ್ತೆ ದಾಟಲು ಪ್ರಯತ್ನಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಮಗು ಅರ್ಧ ದಾರಿಯಿಂದಲೇ ಹೆದರಿ ವಾಪಸ್ ಓಡಿದರೆ, ಮತ್ತೊಂದು ಮಗು ರಸ್ತೆ ದಾಟಲು ಮುಂದಾದಾಗ ಅತಿವೇಗವಾಗಿ ಬಂದ ಬೈಕ್ ಸವಾರ ಮಗುವಿಗೆ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮಗು ದೂರಕ್ಕೆ ಹೋಗಿ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅತಿವೇಗದಲ್ಲಿ ಬೈಕ್ ಚಲಾಯಿಸಿದ ಸವಾರನ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಇಷ್ಟು ಚಿಕ್ಕ ಮಕ್ಕಳನ್ನು ರಸ್ತೆಯಲ್ಲಿ ಒಬ್ಬಂಟಿಯಾಗಿ ಬಿಟ್ಟ ಪೋಷಕರ ಬೇಜವಾಬ್ದಾರಿಯನ್ನು ಜನರು ಪ್ರಶ್ನಿಸುತ್ತಿದ್ದಾರೆ.
ಈ ಘಟನೆ ಮೊದಲು ಅಮ್ರೋಹಾದಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ನಂತರ ಇದು ಕಾಸಗಂಜ್‌ನಲ್ಲಿ ನಡೆದ ಘಟನೆ ಎಂದು ತಿಳಿದುಬಂದಿದೆ. ಜನನಿಬಿಡ ಪ್ರದೇಶಗಳಲ್ಲಿ ವಾಹನಗಳ ವೇಗ ಕಡಿಮೆ ಇರಲಿ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಲಿ ಎಂದು ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
PublicNext
05/04/2026 06:33 pm