ಫ್ಲೋರಿಡಾ (ಅಮೆರಿಕ): ವಿಮಾನ ವಿಳಂಬ ಹಾಗೂ ವಿಮಾನದೊಳಗಿನ ಅತಿಯಾದ ಉಷ್ಣತೆಯಿಂದ ಕಂಗೆಟ್ಟಿದ್ದ ದಂಪತಿಯನ್ನು ಅವರ ಪುಟ್ಟ ಮಗುವಿನ ಸಮೇತ ವಿಮಾನದಿಂದ ಕೆಳಗಿಳಿಸಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಲೆಜಿಯಂಟ್ ಏರ್ ಸಂಸ್ಥೆಗೆ ಸೇರಿದ ಈ ವಿಮಾನವು ಹೊರಡುವುದು ತಡವಾಗಿದ್ದರಿಂದ ಒಳಗಿದ್ದ ಮಗುವಿಗೆ ಅತಿಯಾದ ಸೆಖೆಯಾಗಿ ತೊಂದರೆಯಾಗಿತ್ತು. ಮಗು ತೀವ್ರವಾಗಿ ಅಳುತ್ತಿದ್ದುದರಿಂದ, ಅದರ ತಾಪಮಾನ ಕಡಿಮೆ ಮಾಡುವ ಉದ್ದೇಶದಿಂದ ಪೋಷಕರು ಮಗುವಿನ ಮೇಲಿದ್ದ ಹೆಚ್ಚಿನ ಬಟ್ಟೆಗಳನ್ನು ತೆಗೆದಿದ್ದರು.
ಮಗುವಿನ ಅಳುವಿನಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ತಾಯಿ ಸತತ ಪ್ರಯತ್ನ ನಡೆಸುತ್ತಿದ್ದರು. ಅಲ್ಲಿನ ಪರಿಸ್ಥಿತಿಯನ್ನು ಕಂಡು ಬಹುತೇಕ ಪ್ರಯಾಣಿಕರು ಮಗುವಿನ ಬಗ್ಗೆ ಸಹಾನುಭೂತಿ ತೋರಿದ್ದರು. ಆದರೆ, ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿಮಾನದ ಸಿಬ್ಬಂದಿಯೊಬ್ಬರು (Flight Attendant), ಮಗುವಿಗೆ ಜ್ವರವಿದೆ ಎಂದು ಸುಳ್ಳು ಆರೋಪ ಮಾಡಿದ್ದಲ್ಲದೆ ಮಗುವಿನ ಜನ್ಮ ಪ್ರಮಾಣಪತ್ರವನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ.
ಅಂತಿಮವಾಗಿ ಇದನ್ನೇ ನೆಪವಾಗಿಟ್ಟುಕೊಂಡು ಇಡೀ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಈಗಾಗಲೇ ಮಗುವಿನ ಆರೋಗ್ಯ ಮತ್ತು ವಿಳಂಬದಿಂದ ಆತಂಕದಲ್ಲಿದ್ದ ದಂಪತಿಗೆ, ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ಈ ವರ್ತನೆ ಮತ್ತಷ್ಟು ಆಘಾತ ಮತ್ತು ಮಾನಸಿಕ ಒತ್ತಡವನ್ನುಂಟು ಮಾಡಿದೆ ಎಂದು ವರದಿಯಾಗಿದೆ.
PublicNext
05/04/2026 09:56 pm