ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಮಾನ ಭಂಗಕ್ಕೆ ಯತ್ನ, ನಿಂದನೆ - 50 ಸಾವಿರ ವಸೂಲಿ ಆರೋಪ

ಬೆಳ್ತಂಗಡಿ: ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಗಿಡಗಳನ್ನು ನಾಶಪಡಿಸಲು ಯತ್ನಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾನಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ವಕೀಲೆಯೊಬ್ಬರು 50 ಸಾವಿರ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಗರ್ಡಾಡಿ ಮೂಲದ ಮಹಿಳೆಯೊಬ್ಬರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಗರ್ಡಾಡಿ ಗ್ರಾಮದಲ್ಲಿ ಸುಮಾ ಅವರ ಪತಿಯ ಹೆಸರಿನಲ್ಲಿ ಜಮೀನಿದೆ. ಆ ಜಾಗಕ್ಕೆ ಮಾ. 28ರಂದು ಚೇತನಾ, ಅವರ ಸಹೋದರ, ಚೇತನಾ ತಂದೆ ಹಾಗೂ ತಾರನಾಥ ಎಂಬವರು ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಕೃಷಿಯನ್ನು ನಾಶಪಡಿಸಲು ಯತ್ನಿಸಿದ್ದಾರೆ. ಈ ವೇಳೆ ಸುಮಾ ಅವರು ಆಕ್ಷೇಪಿಸಿದ್ದಾಗ ಚೇತನಾಳ ಸಹೋದರ ಮತ್ತು ತಂದೆ ಮಾನ ಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿದ್ದಾರೆ.

ದೂರು ಕೊಟ್ಟರೆ ನಿನ್ನ ಹಾಗೂ ನಿನ್ನ ಪುತ್ರನನ್ನು ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಯಾವುದೇ ದೂರು ನೀಡಿಲ್ಲ. ಎ.1ರಂದು ತನ್ನ ವಿರುದ್ಧ ನೀಡಿರುವ ದೂರಿನ ವಿಚಾರಣೆಗೆ ಠಾಣೆಗೆ ಬಂದಾಗ ದೂರುದಾರರ ಪರ ವಕೀಲೆ ಟಿಸ್ಮಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ 50 ಸಾವಿರ ನೀಡುವಂತೆ ತಾಕೀತು ಮಾಡಿದ್ದಾರೆ ಎಂದು ಸುಮಾ ದೂರಿನಲ್ಲಿ ಆರೋಪಿಸಿದ್ದಾರೆ.

ಜೊತೆಯಲ್ಲಿದ್ದ ಶಿವಾನಂದ ಅವರು ಹಣದ ವಿಚಾರವನ್ನು ವಕೀಲರ ಕಚೇರಿಯಲ್ಲಿ ನೋಡಿಕೊಳ್ಳಿ ಎಂದು ಹೇಳಿದ್ದರಿಂದ ಸಹಕಾರ ಸಂಘದಲ್ಲಿ ಕರಿಮಣಿ ಅಡವಿಟ್ಟು ಟಿಸ್ಮಿ ವಕೀಲೆಗೆ 50 ಸಾವಿರ ನೀಡಿದ್ದೇನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸುಮಾ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಚೇತನಾ, ಚೇತನಾ ಸಹೋದರ, ತಾರಾನಾಥ್ ಶೆಟ್ಟಿ, ಚೇತನಾ ತಂದೆ, ವಕೀಲೆ ಟಿಸ್ಮಿ ವಿರುದ್ಧ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

05/04/2026 10:13 pm

Cinque Terre

6.49 K

Cinque Terre

0