ಮಂಗಳೂರು: ಮಾದಕದ್ರವ್ಯ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ರವರು ಅಪರಾಧಿಗೆ 7ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.
ಮಂಗಳೂರಿನ ಬಂದರು ಅನ್ಸಾರಿ ಕ್ರಾಸ್ ರೋಡ್ ಟಿ. ಪಿ ಫಾರೂಕ್ ನಿವಾಸಿ ಶಿಕ್ಷೆಗೊಳಗಾದ ಅಪರಾಧಿ.
ಟಿ.ಪಿ.ಫಾರೂಕ್ 2020 ನ.10ರಂದು ಸಂಜೆ 5:30 ಗಂಟೆಗೆ ಮೆಲ್ಕಾರ್ ಎಂಬಲ್ಲಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಚಲುವರಾಜು ಬಿ. ತಮ್ಮ ತಂಡದೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳಾದ ಟಿ.ಪಿ.ಫಾರೂಕ್ ಮತ್ತು ಸಾಗರ್ ಸಿಂಗ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 1 ಕೆ.ಜಿ 375 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ.
ಅಲ್ಲದೆ ಟಿ.ಪಿ ಫಾರೂಕ್ ಪ್ಯಾಂಟ್‌ನ ಕಿಸೆಯಲ್ಲಿ 4 ಪ್ಲಾಸ್ಟಿಕ್ ಪ್ಯಾಕೇಟಿನಲ್ಲಿ 15 ಗ್ರಾಂ ನಂತೆ ಒಟ್ಟು 60 ಗ್ರಾಂ ತೂಕದ ಗಾಂಜಾ ಮತ್ತು ಸಾಗರ್ ಸಿಂಗ್ ಪ್ಯಾಂಟ್‌ನ ಕಿಸೆಯಲ್ಲಿ 3ಪ್ಲಾಸ್ಟಿಕ್ ಪ್ಯಾಕೇಟಿನಲ್ಲಿ 15 ಗ್ರಾಂ ನಂತೆ ಒಟ್ಟು 45 ಗ್ರಾಂ ಗಾಂಜಾ ಪತ್ತೆಯಾಗಿದೆ. ತಕ್ಷಣ ಪೊಲೀಸರು ಕಾರು, ಮೊಬೈಲ್ ಫೋನ್‌ಗಳನ್ನು ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ, ಬಂಟ್ವಾಳ ನಗರ ಪೊಲೀಸ್ ಠಾಣೆಯ ಮೊ.ನಂ 126/2020 ರಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯ ಕಲಂ 8(C), 20(b)(ii)(b) ರನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಆರೋಪಿಗಳ ವಿರುದ್ಧ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ತನಿಖೆ ಪೂರ್ಣಗೊಳಿಸಿ ಎನ್.ಡಿ.ಪಿ.ಎಸ್ ಕಾಯ್ದೆಯ ಕಲಂ 8(C), 20(b)(i)(b) ರನ್ವಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿರುತ್ತಾರೆ. ಪ್ರಕರಣದ 2ನೇ ಆರೋಪಿ ಸಾಗರ್ ಸಿಂಗ್ ನ್ಯಾಯಾಲಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡಿರುವ ಕಾರಣ ಆತನ ವಿರುದ್ಧದ ಪ್ರಕರಣವನ್ನು ಸ್ಟ್ರೀಟ್ ಅಪ್ ಸ್ಪೆಶಲ್ ಕೇಸ್ ನಂ 19/2024 ರಂತೆ ವಿಭಜಿಸಲಾಗಿರುತ್ತದೆ.
ಈ ಪ್ರಕರಣದಲ್ಲಿ ಒಟ್ಟು 10 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿದ್ದು, ಒಟ್ಟು 29 ದಾಖಲೆಗಳನ್ನು ಗುರುತಿಸಲಾಗಿರುತ್ತದೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಟಿ.ಪಿ ಫಾರೂಕ್ ದೋಷಿಯೆಂದು ತೀರ್ಪು ನೀಡಿ 7 ವರ್ಷಗಳ ಕಠಿಣ ಸಜೆ ಮತ್ತು 50,000 ರೂ. ದಂಡ, ದಂಡ ಪಾವತಿಸುವಲ್ಲಿ ವಿಫಲನಾದರೆ 2 ತಿಂಗಳ ಸಾದಾ ಸಜೆ ವಿಧಿಸಿದೆ.
ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತ ರವರು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದಾರೆ.
Kshetra Samachara
04/04/2026 10:18 pm