ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೇರಾಡಿ ಗ್ರಾಮದ ನಿವಾಸಿ ಯಂ. ಮಂಜುನಾಥ ರಾವ್ (77) ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ, ಕಳ್ಳರು ಮನೆಯ ಮುಂಭಾಗದ ಬಾಗಿಲು ಒಡೆದು ಒಳನುಗ್ಗಿದ್ದಾರೆ.
ನಂತರ ಬೆಡ್‌ರೂಮ್‌ನಲ್ಲಿದ್ದ ಗೋಡ್ರೇಜ್ ಅಲಮಾರಿಯ ಬೀಗ ಒಡೆದು, ಸುಮಾರು 14,67,000 ರೂ. ಮೌಲ್ಯದ ಚಿನ್ನಾಭರಣ ಮತ್ತು 49,000 ರೂ. ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 45/2026 ಅಡಿ BNS 334(4), 305 ಕಲಂ ಪ್ರಕಾರ ಪ್ರಕರಣ ದಾಖಲಾಗಿತ್ತು.
ತನಿಖೆಯನ್ನು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ ಹಾಗೂ ಪಿಎಸ್ಐ ಅಶೋಕ್ ಮಾಳಾಬಗಿ ನೇತೃತ್ವದ ತಂಡ ಕೈಗೊಂಡು, ಆರೋಪಿ ಪ್ರವೀಣ್ ಕುಮಾರ್ ಕೆ (ಬಾರಕೂರು ನಿವಾಸಿ) ಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
PublicNext
04/04/2026 05:02 pm