ಮಂಗಳೂರು: ಉದ್ಯೋಗವನ್ನು ಅರಸಿ ದೂರದ ಕೋಲ್ಕತ್ತಾದಿಂದ ಮಂಗಳೂರಿಗೆ ಬಂದ ತರಕಾರಿ ವ್ಯಾಪಾರಿಯೊಬ್ಬರು ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿ ಬಂಗಾರದ ಬೆಳೆ ಬೆಳೆದಿದ್ದಾರೆ.
ಮಂಗಳೂರಿನ ಗುರುಪುರ ಪರಿಸರದಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡದೆ ಖಾಲಿ ಬಿದ್ದಿದ್ದ ಗದ್ದೆಗಳು ಜೋಬೇದ್ ಆಲಿಯವರ ಕಣ್ಣಿಗೆ ಬಿದ್ದಿದೆ. ಈ ಗದ್ದೆಗಳ ಮಾಲಕರ ಮನವೊಲಿಸಿ ಆ ಭೂಮಿಯಲ್ಲಿ ಕೃಷಿ ಮಾಡಿದ್ದಾರೆ. ಯಾವುದೇ ಲೀಸ್ ಅಥವಾ ಒಪ್ಪಂದವಿಲ್ಲದೆ ಈ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಅವರು ಹಡೀಲು ಬಿದ್ದ ಗದ್ದೆಯನ್ನು ಜೀವಂತಗೊಳಿಸಿದ್ದಾರೆ.
ಕಳೆದ 10-12 ವರ್ಷಗಳಿಂದ ಕೃಷಿ ಮಾಡುತ್ತಿರುವ ಜೋಬೇದ್ ಆಲಿ ಭತ್ತದೊಂದಿಗೆ ಎಂಟರಿಂದ ಹತ್ತು ವಿಧದ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೃಷಿಯಲ್ಲಿ ಶ್ರಮ ಮತ್ತು ಸಮಯವನ್ನು ಉಳಿಸಲು ಅವರು ಕೋಲ್ಕತ್ತಾದಿಂದ ಒಂದು ವಿಶೇಷ ಯಂತ್ರವನ್ನು ತರಿಸಿಕೊಂಡಿದ್ದಾರೆ. ಭತ್ತದ ಕೊಯ್ಲಿನ ಬಳಿಕ ಧಾನ್ಯವನ್ನು ಬೇರ್ಪಡಿಸುವ ಈ ಯಂತ್ರದಿಂದ 30-40 ಮಾಡುವ ಕೆಲಸವನ್ನು ಕಡಿಮೆ ಸಮಯದಲ್ಲಿ ಕೆಲವೇ ಜನರಿಂದಲೇ ಮಾಡಬಹುದು. ಇದರಿಂದ ಕೆಲಸ ವೇಗವಾಗಿ ಮುಗಿಯುವುದರ ಜೊತೆಗೆ ಖರ್ಚು ಕೂಡ ಕಡಿಮೆಯಾಗುತ್ತದೆ.
ಹಡೀಲು ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿ ಯಶಸ್ಸು ಸಾಧಿಸಿರುವ ತರಕಾರಿ ವ್ಯಾಪಾರಿ ಜೋಬೇದ್ ಅಲಿಯವರ ಪರಿಶ್ರಮ ಇತರ ರೈತರಿಗೆ ಮಾದರಿಯಾಗಿದೆ. ಅವರ ಈ ಸಾಧನೆ ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
PublicNext
04/04/2026 10:14 pm