ಮಂಗಳೂರು: ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯ ರಸ್ತೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವ ಮತ್ತು ಸುಡುವ ಪ್ರಕರಣಗಳನ್ನು ಗುರುತಿಸಿ ದಂಡ ವಿಧಿಸಬೇಕು. ದಂಡ ಪಾವತಿಸದೆ ಇದ್ದಲ್ಲಿ ಸ್ಥಳೀಯ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ದ.ಕ. ಜಿಪಂ ಸಿಇಒ ನರ್ವಡೆ ನಾಯಕ ಕಾರ್ಬಾರಿ ಸೂಚಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಾಪಂ ಇಒ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಜೊತೆ ಅವರು ವೀಡಿಯೊ ಸಭೆ ನಡೆಸಿ ಮಾತನಾಡುತ್ತಿದ್ದರು.
ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ಆಯೋಜಿಸುವ ಸ್ವಚ್ಛ ಶನಿವಾರ-ಸ್ವಚ್ಛತಾ ಕಾರ್ಯದಂದು ಗ್ರಾಪಂಗಳು ತಮ್ಮ ವ್ಯಾಪ್ತಿಯ ಎಲ್ಲಾ ರಸ್ತೆ ಇಕ್ಕೆಲಗಳನ್ನು ಸ್ವಚ್ಛಗೊಳಿಸಬೇಕು. ಸ್ವಚ್ಛ ಸಂಕೀರ್ಣ ಹೊಂದಿರದ 63 ಗ್ರಾಪಂಗಳಲ್ಲಿ ಘಟಕ ನಿರ್ಮಾಣದ ಬಗ್ಗೆ ತಾಪಂ ಅನಿರ್ಬಂಧಿತ ನಿಧಿ ಮತ್ತು ಗ್ರಾಪಂಗಳಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿ ಕನಿಷ್ಠ 1,000 ಚದರ ಅಡಿ ವಿಸ್ತೀರ್ಣದ ಘಟಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸುವಂತೆ ಜಿಪಂ ಸಿಇಒ ಸೂಚಿಸಿದರು.
ನೈರ್ಮಲ್ಯ ತ್ಯಾಜ್ಯ ನಿರ್ವಹಣೆಗಾಗಿ ಮೊದಲ ಹಂತದಲ್ಲಿ 92 ಗ್ರಾಪಂಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ತ್ಯಾಜ್ಯ ನಿರ್ವಹಣೆ ಸಂಸ್ಥೆಯೊಂದಿಗೆ 48 ಗ್ರಾಪಂಗಳು ಕೂಡಲೇ ಒಪ್ಪಂದ ಮಾಡಿಕೊಳ್ಳಬೇಕು. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಈಗಾಗಲೇ ಹೊರಡಿಸಲಾಗಿರುವ ಸುತ್ತೋಲೆಯಂತೆ ಗ್ರಾಪಂಗಳಲ್ಲಿ ಈ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹ, ಮಾರಾಟ, ವಿತರಣೆ ಮಾಡುವುದರ ನಿಯಂತ್ರಣಕ್ಕಾಗಿ ಪರಿಶೀಲನೆ, ದಾಳಿ ನಡೆಸಿ ದಂಡ ವಿಧಿಸಲು ಮತ್ತು ಪರ್ಯಾಯ ವಸ್ತುಗಳ ಬಳಕೆಯನ್ನು ಹೆಚ್ಚಿಸಲು ಕ್ರಮ ವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಬೇಕು. ದಂಡ ಸಂಗ್ರಹಕ್ಕಾಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಪಂಗಳಿಗೆ ಗುರಿ ನಿಗದಿಪಡಿಸಲು ಸಲಹೆ ನೀಡಿದರು.
ಸಭೆಯಲ್ಲಿ ದ.ಕ. ಜಿಪಂ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್, ಯೋಜನಾ ಅಧಿಕಾರಿ ಇ.ಜಯರಾಮ್, ಪರಿಸರ ಅಧಿಕಾರಿ ಮಹೇಶ್ವರಿ ಸಿಂಗ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರು ಮತ್ತಿತರರು ಭಾಗವಹಿಸಿದ್ದರು.
PublicNext
03/04/2026 03:26 pm