ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹನಿಟ್ರ್ಯಾಪ್ ಆರೋಪ ಸಂಪೂರ್ಣ ಸುಳ್ಳು - ಮೃತ ಉದ್ಯಮಿ ಸುದೀಪ್ ರೈ ಪತ್ನಿ ನಟಿ ಸೌಮ್ಯಾ ಶೆಟ್ಟಿ

ಉಡುಪಿ: ಸುದೀಪ್ ರೈ ಆಸ್ಪತ್ರೆಯಲ್ಲೇ ಪೊಲೀಸರ ಮುಂದೆಯೇ 'ವೈಯಕ್ತಿಕ ಕಾರಣದಿಂದ ನಾನೇ ಸ್ವ ಇಚ್ಛೆಯಿಂದ ವಿಷ ತೆಗೆದುಕೊಂಡಿದ್ದೇನೆ' ಎಂದು ಹೇಳಿದ್ದಾರೆ. ಆದರೆ ಸುದೀಪ್‌ ರೈ ತಂದೆ ಮತ್ತು ವೇಣುಗೋಪಾಲ ಶೆಟ್ಟಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು.‌ ನನ್ನ ವಿರುದ್ಧ ಕೇಳಿಬರುತ್ತಿರುವ ಹನಿ ಟ್ರ್ಯಾಪ್ ಆರೋಪ ಸಂಪೂರ್ಣ ಸುಳ್ಳಾಗಿದ್ದು, ಇದು ನನ್ನ ವ್ಯಕ್ತಿತ್ವಕ್ಕೆ ಹಾನಿ ಮಾಡುವ ಉದ್ದೇಶದಿಂದ ಮಾಡುತ್ತಿರುವ ಆರೋಪ ಎಂದು ಸುದೀಪ್‌ ರೈ ಪತ್ನಿ ನಟಿ ಸೌಮ್ಯ ಶೆಟ್ಟಿ ಹೇಳಿದ್ದಾರೆ.

ಸುದೀಪ್‌ ರೈ ತಂದೆ ಮತ್ತು ವೇಣುಗೋಪಾಲ ಶೆಟ್ಟಿ ಅವರ ಆರೋಪಗಳಿಗೆ ಇಂದು ಪ್ರತಿಕ್ರಿಯೆ ನೀಡಿದರು. ಸುದೀಪ್ ಅವರು ತಮ್ಮ ತಂದೆಯ ಮನೆಗೆ ತೆರಳಿದ್ದ ಸಮಯದಲ್ಲೇ ಈ ದುರ್ಘಟನೆ ಸಂಭವಿಸಿದೆ. ಈ ವಿಚಾರದಲ್ಲಿ ನನ್ನನ್ನು ದೂರುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.

ಸುದೀಪ್ ರೈ ಮನೆಯವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸುದೀಪ್ ರೈ ನಮ್ಮ ಮದುವೆ ವಿಚಾರದ ಕುರಿತು ಮಾತನಾಡಲು ಅವರ ಮನೆಗೆ ತೆರಳಿದ್ದರು. ಆದರೆ ಅಲ್ಲಿ ಹೋದ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಎಷ್ಟೇ ಕರೆ ಮಾಡಿದರು ಕರೆ ಸ್ವೀಕರಿಸುತ್ತಿರಲಿಲ್ಲ. ಬಳಿಕ ಮತ್ತೆ ಕರೆ ಮಾಡಿದಾಗ ನಾನು ಸಮಸ್ಯೆ ಅಲ್ಲಿ ಇದ್ದೇನೆ. ನಾನು ಅಲ್ಲಿಗೆ ಬಂದು ಹೇಳುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದ್ರು. ಇವರು‌ ಏನು ಸಮಸ್ಯೆಯಲ್ಲಿ ಇದ್ದಾರೆ ಎಂದು ತಿಳಿದು ನಾನು ಅವರ ಮನೆಗೆ ತೆರಳಿದೆ. ಆಗ ನಾನು ಬರುವುದನ್ನು ನೋಡಿದ ಸುದೀಪ್ ಅವರು ರಸ್ತೆ ಮಧ್ಯೆ ನಿಲ್ಲಿಸಿದ್ರು. ಆಗ ಅವರ ತಾಯಿ ನೀನು ನನಗೆ ಇಷ್ಟ ಇಲ್ಲ, ನೀನು ನನ್ನ ಮಗನಿಗೆ ವಿಚ್ಛೇದನ ಕೊಡಬೇಕು ಹೇಳಿದ್ರು. ನಮ್ಮ ಮದುವೆ ನೋಂದಣಿ ಆಗಿದೆ.‌ ನಾವು ಇಬ್ಬರು ಒಟ್ಟಿಗೆ ಇದ್ದೇವೆ ಎಂದು ನಾನು ಹೇಳಿದೆ. ಅದಕ್ಕೆ ತುಂಬಾ ಕೆಟ್ಟ ಪದಗಳಿಂದ ಬೈದರು. ನಾನು ಅಲ್ಲೇ ಕೂಗಿದೆ. ಆಗ ಸುದೀಪ್ ಅವರು ಹೇಳಿದ್ರು. ಆಕೆ ಅಲ್ಲಿಂದ ಇಲ್ಲಿತನಕ ಬಂದಿದ್ದಾಳೆ, ಈಗ ಏನೂ ಮಾತನಾಡಬೇಡಿ ಅಂದ್ರು. ಅಲ್ಲಿ ಯಾವುದೇ ಜಗಳ‌ ಆಗಿಲ್ಲ‌. ನಾನು ಯಾರನ್ನು ತಳ್ಳಾಟ ನಡೆಸಿಲ್ಲ.‌ ಅಲ್ಲಿರುವ ಸಿಸಿಟಿವಿಯಲ್ಲಿ ಬೇಕಾದ್ರೂ ಚೆಕ್ ಮಾಡಬಹುದು. ಸುಖಾಸುಮ್ಮನೆ ನನ್ನ ಮೇಲೆ ಆರೋಪ ಹೊರೆಸುತ್ತಿದ್ದಾರೆ ಎಂದು ದೂರಿದರು.

ಸುದೀಪ್ ಅವರು ರಸ್ತೆಯಲ್ಲಿ ಬರುವಾಗ ಮನೆಯಲ್ಲಿ ಒಂದು ವಿಷಯ ನಡೆದಿದೆ. ಅದನ್ನು ಹೇಳುತ್ತೇನೆ ಎಂದಿದ್ದರು. ಆದರೆ ಕಡೆಯವರೆಗೂ ಆ ವಿಷಯ ಏನೆಂದೂ ಹೇಳಿಲ್ಲ. ಸುದೀಪ್ ಅವರ ಮನೆಗೆ ಹೋಗಿ ಬಂದ ಬಳಿಕ ತುಂಬಾ ಬಳಲಿದ್ದರು. ಅಲ್ಲಿ ಏನೂ ವಿಷಯ ಆಗಿದೆ ಅಂತಾ ನನಗೆ ಗೊತ್ತಿಲ್ಲ. ಅಲ್ಲಿ ನಡೆದ ಕಾರಣದಿಂದಲೇ ಅವರು ವಿಷ ಸೇವಿಸಿರಬಹುದು. ಅವರ ಮನೆಯವರ ಮೇಲೆ ಸಂಶಯವಿದೆ. ಹೀಗಾಗಿ ಈ ಬಗ್ಗೆ ದೂರು ದಾಖಲಿಸುತ್ತೇನೆ ಎಂದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಸಂಪೂರ್ಣ ವಿಷಯವನ್ನು ವಿವರಿಸಿ, ನ್ಯಾಯಯುತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ನನಗೆ ನ್ಯಾಯ ದೊರಕಬೇಕು ಎಂದು ಸೌಮ್ಯ ಶೆಟ್ಟಿ ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

03/04/2026 12:15 pm

Cinque Terre

11.22 K

Cinque Terre

0