ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೊಮ್ಮೆ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ತಲೆದೋರಿದ್ದು, ಸಂಡೂರು ತಾಲೂಕಿನ ಬನ್ನಿಹಟ್ಟಿ ಚೆಕ್‌ಪೋಸ್ಟ್‌ನಲ್ಲಿ ಭಾರೀ ಮಟ್ಟದ ಅಕ್ರಮ ಅದಿರು ಸಾಗಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ, ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಲಾರಿಗಳಲ್ಲಿ ಸಾವಿರಾರು ಟನ್ ಅದಿರು ಇದೇ ಮಾರ್ಗದ ಮೂಲಕ ಸಾಗಾಟವಾಗುತ್ತಿದೆ. ಗಣಿ ಗುಡ್ಡಗಳಿಂದ ಹೊರಡುವಾಗ ಒಂದೇ ತೂಕವಿರುವ ಅದಿರು, ಕಾರ್ಖಾನೆ ತಲುಪುವಷ್ಟರಲ್ಲಿ ಹೆಚ್ಚುವರಿ ತೂಕ ಹೊಂದಿರುವುದು ಪತ್ತೆಯಾಗಿದ್ದು, ಅಕ್ರಮವಾಗಿ ಹೆಚ್ಚುವರಿ ಅದಿರು ಸಾಗಾಟದ ಮೂಲಕ ತೆರಿಗೆ ವಂಚನೆ ನಡೆಯುತ್ತಿದೆ ಎನ್ನಲಾಗಿದೆ.
ಚೆಕ್‌ಪೋಸ್ಟ್‌ನಲ್ಲಿ ನಾಲ್ಕು ವಿಂಡೋಗಳಿದ್ದರೂ, ಉದ್ದೇಶಪೂರ್ವಕವಾಗಿ ಮೂರು ವಿಂಡೋಗಳನ್ನು ಮುಚ್ಚಿ ಒಂದೇ ಮಾರ್ಗವನ್ನು ತೆರೆಯಲಾಗಿದೆ. ಇದರಿಂದ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಟ್ರಾಫಿಕ್ ಜಾಮ್ ನೆಪದಲ್ಲಿ ಸರಿಯಾದ ಪರಿಶೀಲನೆ ನಡೆಸದೆ ವಾಹನಗಳನ್ನು ಮತ್ತೊಂದು ಮಾರ್ಗದಿಂದ ಬಿಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದಲ್ಲದೆ, ಚೆಕ್‌ಪೋಸ್ಟ್ ಬಳಿ ಸೀಲ್ ಹಾಕದೇ ಅದಿರನ್ನು ಸಾಗಾಟ ಮಾಡುತ್ತಿರುವುದರಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದ ರಾಜಸ್ವ ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ಅಕ್ರಮಗಳ ಕುರಿತು ಸ್ವತಃ ಬಳ್ಳಾರಿ ಸಂಸದ ಇ. ತುಕಾರಾಂ ಅವರು ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಸಮೇತ ಆರೋಪಗಳನ್ನು ಬಯಲಿಗೆಳೆದಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಈ ಅಕ್ರಮಗಳಿಗೆ ಕಾರಣ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
23/04/2026 03:21 pm