ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ರೈತರಿಗೆ ವಿತರಿಸಿದ ಗೊಬ್ಬರದ ತೂಕದಲ್ಲಿ ಮೋಸ

ಮಡಿಕೇರಿ: ರಸ ಗೊಬ್ಬರದ ತೂಕದಲ್ಲಿ ವ್ಯತ್ಯಾಸವಿರುವ ಬಗ್ಗೆ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ಮಡಿಕೇರಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತೂಕ ವ್ಯತ್ಯಾಸವಿರುವ ಗೊಬ್ಬರದ ಚೀಲಗಳ ಲೋಡ್ ಸಹಿತ ಆಗಮಿಸಿದ ಸಂಘದ ಆಡಳಿತ ಮಂಡಳಿ ಸದಸ್ಯರು ಈ ಕುರಿತು ಅಧಿಕಾರಿಗಳ ಗಮನ ಸೆಳೆದರು. ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಗೊಬ್ಬರದ ಲೋಡ್ ತಂದು ತೂಕ ಮಾಡಿದ ಸಂದರ್ಭ 50 ಕೆ.ಜಿ ಮೂಟೆಗಳಲ್ಲಿ ತೂಕ ಕಡಿಮೆ ಇರುವುದು ಗಮನಕ್ಕೆ ಬಂದಿದೆ.

ಇದನ್ನು ಪರಿಶೀಲಿಸಿದ ಕೃಷಿ ಉಪನಿರ್ದೇಶಕ ಸೋಮಶೇಖರ್, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸರಬರಾಜು ಮಾಡಿದ ಸಂಸ್ಥೆಯಿಂದ ಉತ್ತರ ಪಡೆಯಲಾಗುವುದು. ಈ ವಿಷಯದಲ್ಲಿ ರೈತ ಪರವಾಗಿ ಸ್ಪಂದಿಸಲಾಗುವುದು. ಗೊಬ್ಬರ ಮೂಟೆಯ ಬ್ಯಾಚ್ ಅನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಂಘಕ್ಕೆ 18.2.2026 ಮತ್ತು 5.3.2026ರಂದು ಸರಬರಾಜಾದ 51 ಟನ್ ಗೊಬ್ಬರ ತೂಕದಲ್ಲಿ ವ್ಯತ್ಯಾಸವಾಗಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಆಕ್ರೋಶ ವ್ಯಕ್ತಪಡಿಸಿದರು. ತೂಕ ವ್ಯತ್ಯಾಸವಿರುವುದು ಗಮನಕ್ಕೆ ಬಂದ ತಕ್ಷಣ ಉತ್ಪಾದಕ ಸಂಸ್ಥೆಯ ಗಮನಕ್ಕೂ ತರಲಾಗಿದೆ. ಈ ಗೊಬ್ಬರ ದೇಶದ ಎಲ್ಲೆಡೆ ಪೂರೈಕೆ ಆಗುವುದರಿಂದ ರೈತರಿಗೆ ಮೋಸವಾದಂತಾಗಿದೆ. ರೈತರಿಗೆ ಸೂಕ್ತ ಗೊಬ್ಬರವೂ ಇಲ್ಲ, ಹಣವೂ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳು ಸೇರಿದಂತೆ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಲಾಗುವುದು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನಾತ್ಮಕವಾಗಿ ಹೋರಾಡಲಾಗುವುದು ಎಂದು ಬಾಂಡ್ ಗಣಪತಿ ಎಚ್ಚರಿಸಿದರು.

Edited By :
PublicNext

PublicNext

24/04/2026 09:11 am

Cinque Terre

16.71 K

Cinque Terre

0