ಲಿಂಗಸುಗೂರು : ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಗ್ರಾಮದ ಭಜಂತ್ರಿ ಕಾಲೋನಿಯಲ್ಲಿ ಕೈಗೆತ್ತಿಕೊಳ್ಳಲಾದ ಈ ಕಾಮಗಾರಿಗೆ ಸುಮಾರು ₹50 ಲಕ್ಷ ವೆಚ್ಚ ನಿಗದಿಪಡಿಸಲಾಗಿದ್ದರೂ, ಸ್ಥಳದಲ್ಲಿನ ಕೆಲಸ ಅರೆಬರೆ ರೀತಿಯಲ್ಲಿ ಸಾಗುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.
ರಸ್ತೆ ನಿರ್ಮಾಣದಲ್ಲಿ ಕೇವಲ ಜೆಲ್ಲಿಕಲ್ಲು (ಗ್ರಾವೆಲ್) ಹಾಕಿದ್ದಾರೆ ತಿಳಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕಾದ ರಸ್ತೆ ಮತ್ತಷ್ಟು ತೊಂದರೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಸಂಬಂಧಪಟ್ಟ ಕೆಕೆಆರ್‌ಡಿಬಿ ಇಲಾಖೆಯ ಎಇಇ ಹನುಮಂತಪ್ಪ ಸ್ಥಳಕ್ಕೆ ಭೇಟಿ ನೀಡದೆ ಗೈರಾಗಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಮೇಲ್ವಿಚಾರಣೆಯ ಕೊರತೆಯಿಂದಲೇ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಯ ಗುಣಮಟ್ಟವನ್ನು ತಕ್ಷಣ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಾರ್ವಜನಿಕ ಹಣ ವ್ಯರ್ಥವಾಗದಂತೆ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿದೆ.
Kshetra Samachara
25/04/2026 05:38 pm