ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರಿಗೆ ಅನ್ಯಾಯ: ವಿಮೆ ಬೇಡ ಎಂದು ನಾವೇ ಹೇಳಬೇಕಾಗುತ್ತದೆ – ಸಚಿವ ಪರಮೇಶ್ವರ

ತುಮಕೂರು: ವಿಮಾ ಕಂಪನಿಗಳಿಂದ ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯ್ತಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು, ವಿಮಾ ಕಂಪನಿ ರೈತರಿಂದ ವಿಮೆ ಮಾಡಿಸಿ ಪರಿಹಾರ ಕೊಡುವಾಗ ನಿಬಂಧನೆಗಳನ್ನು ವಿಧಿಸಿ ಕಡಿಮೆ ಪರಿಹಾರ ನೀಡುವುದು ಸರಿಯಲ್ಲ. ರೈತರಿಗೆ ಸರಿಯಾದ ವಿಮೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಾವೇ ರೈತರಿಗೆ ವಿಮೆ ಮಾಡದಂತೆ ತಿಳಿಸಬೇಕಾಗುತ್ತದೆ ಎಂದರು.

ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಜಿ.ಪ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಮಾ ಕಂಪನಿಗಳ ಸಭೆ ಕರೆದು ಚರ್ಚಿಸಿ ನಿಬಂಧನೆಗಳನ್ನು ಸಡಿಲಗೊಳಿಸಲು ತಿಳಿಸಬೇಕು. ಅಲ್ಲದೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ. ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.

ಕೃಷಿ ಇಲಾಖೆ ಮಾಹಿತಿ ಪಡೆಯುವ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಕುಣಿಗಲ್ ತಾಲೂಕಿನಲ್ಲಿ ಮಾತ್ರ ಅತ್ಯಂತ ಕಡಿಮೆ 1453 ರೈತರು ವಿಮೆ ಮಾಡಿಸಿದ್ದಾರೆ. ಕಾರಣ ಏನು ಎಂದು ಪ್ರಶ್ನಿಸಿದರು. ಶಾಸಕ ಎಚ್.ಡಿ.ರಂಗನಾಥ್ ಅವರು ಕೇಂದ್ರ ಸರ್ಕಾರದ ಮೇಲೆ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ರೈತರು ವಿಮೆ ಮಾಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರಿಗೆ ವಿಮೆ ಮಾಡಿಸುವ ಸಂಬಂಧ ಜಾಗೃತಿ ಮೂಡಿಸಬೇಕು. ಅಲ್ಲದೆ ವಿಮಾ ಕಂಪನಿಗಳ ನಿಬಂಧನೆಗಳನ್ನು ಪರಿಷ್ಕರಿಸಬೇಕು ಹಾಗೂ ನಿಯಮಗಳ ಸಡಿಲಿಕೆಯೂ ಆಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಸಭೆಯಲ್ಲಿದ್ದ ಶಾಸಕರು ಆಗ್ರಹಿಸಿದರು.

ವಿಮಾ ಕಂಪನಿಗಳು ರೈತರ ವಿಮಾ ಹಣದಿಂದಲೇ ಬದುಕುತ್ತಿರುವುದು. ಜಿಲ್ಲೆಯಲ್ಲಿ 7 ಕೋಟಿ ರೂ. ವಿಮೆ ಪಡೆದು 1.5 ಕೋಟಿ ರೂ. ಪರಿಹಾರ ನೀಡಿವೆ ಎಂದರೆ ಏನರ್ಥ ಎಂದು ಸಭೆಯಲ್ಲಿ ಶಾಸಕರು ಪ್ರಶ್ನಿಸಿದರು.

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾವು ಬೆಳೆನಷ್ಟದ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ 4584 ಜಾನುವಾರುಗಳ ಸಾವಿನ ಕಾರಣದ ಬಗ್ಗೆ ಚರ್ಚಿಸಲಾಯಿತು. ಸಂಬಂಧಿಸಿದ ಪರಿಹಾರಗಳನ್ನು ಶೀಘ್ರ ರೈತರಿಗೆ ನೀಡಬೇಕು ಎಂದರು.

ಅಲ್ಲದೆ ನವಿಲುಗಳು ಸಾವಿಗೀಡಾಗುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಇದು ಹಕ್ಕಿ ಜ್ವರದ ಶಂಕೆ ವ್ಯಕ್ತವಾಗಿದ್ದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ವಾರದಲ್ಲಿ ವರದಿ ಬರುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಕಾಯಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ಸಂಬಂಧಿಸಿದಂತೆ ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಪ್ರಸ್ತುತ 139 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಒಟ್ಟು 34 ಹಳ್ಳಿಗಳಲ್ಲಿ ಟ್ರಾಕ್ಟರ್ ಹಾಗೂ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ 122 ಕೊಳವೆಬಾವಿಗಳಿಗೆ ಟಾಸ್ಕ್ ಫೋರ್ಸ್ ಮೂಲಕ ಅನುಮೋದನೆ ನೀಡಲಾಗಿದ್ದ ಈ ಪೈಕಿ 65 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, 53 ನೀರು ಬಿದ್ದಿದೆ ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು, ಅಂತರ್ಜಲ ಕುಸಿತದಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಸಮಸ್ಯೆ ಸಾಧ್ಯತೆ ಇದ್ದು ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ‌ಮಾಡಲಾಯಿತು.

ಸಭೆಯಲ್ಲಿ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಹೆಗಡೆ, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಆಶ್ವಿಜ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/04/2026 07:59 am

Cinque Terre

880

Cinque Terre

0

ಸಂಬಂಧಿತ ಸುದ್ದಿ