ಬೀದರ್: ಗಡಿಜಿಲ್ಲೆ ಬೀದರ್‌ನಲ್ಲಿ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಸರಾಸರಿ 41 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ ಮೂಕ ಪ್ರಾಣಿ-ಪಕ್ಷಿಗಳು ಕೂಡ ಹನಿ ನೀರಿಗಾಗಿ ಕಂಗಾಲಾಗಿವೆ. ಬೀದರ್‌ನ ಚಿಟ್ಟಾ ಮೀಸಲು ಅರಣ್ಯ ಸೇರಿದಂತೆ ಜಿಲ್ಲೆಯ ವಿವಿಧ ಕಾಡುಗಳ ಪರಿಸ್ಥಿತಿ. ದಾಖಲೆಯ ರಣಬಿಸಿಲಿನಿಂದಾಗಿ ಕಾಡಿನೊಳಗಿನ ಕೆರೆ-ಕುಂಟೆಗಳು ಸಂಪೂರ್ಣ ಖಾಲಿಯಾಗಿವೆ. ಹನಿ ನೀರಿಗಾಗಿ ವನ್ಯಜೀವಿಗಳು ಊರುಗಳ ಕಡೆ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಾಣಿ-ಪಕ್ಷಿಗಳ ಈ ಪರದಾಟವನ್ನು ಕಂಡು ಮರುಗಿದ ಸ್ಥಳೀಯ ಸ್ವಾಭಿಮಾನಿ ಗೆಳೆಯರ ಬಳಗ ಕಾಡಿನ ಅಲ್ಲಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸುವ ಮೂಲಕ ಜೀವಪರ ಕಾಳಜಿ ಮೆರೆದಿದೆ.
ಕೇವಲ ತೊಟ್ಟಿ ನಿರ್ಮಿಸಿ ಸುಮ್ಮನಾಗದ ಈ ತಂಡ, ಪ್ರತಿದಿನ ಟ್ಯಾಂಕರ್ ಮೂಲಕ ಕಾಡಿನ ಒಳಭಾಗಕ್ಕೆ ತೆರಳಿ ನೀರನ್ನು ತುಂಬಿಸುತ್ತಿದ್ದಾರೆ. ಇದರಿಂದಾಗಿ ಜಿಂಕೆ, ನವಿಲು ಹಾಗೂ ನೂರಾರು ಪಕ್ಷಿಗಳು ನಿಶ್ಚಿಂತೆಯಿಂದ ದಾಹ ನೀಗಿಸಿಕೊಳ್ಳುತ್ತಿವೆ. ಈ ಗೆಳೆಯರ ಬಳಗ ಸ್ವಯಂಪ್ರೇರಿತವಾಗಿ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿ ನಿಂತಿರುವ ಈ ತಂಡದ ಕಾರ್ಯಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
PublicNext
26/04/2026 04:43 pm
LOADING...