ತುಮಕೂರು: ವಿಜಯಸೇನೆಯ ಮಹಿಳಾ ಘಟಕದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 50 ಮಂದಿ ಸಾಧಕ ಮಹಿಳೆಯರಿಗೆ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಕನ್ನಡ ಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿಜಯಸೇನೆಯ ಜಿಲ್ಲಾ ಮಹಿಳಾ ಘಟಕ ಏರ್ಪಡಿಸಿದ್ದ ಬೆಳವಾಡಿ ಮಲ್ಲಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕಿಯರು, ವೈದ್ಯರು, ಪೊಲೀಸರು, ಸಮಾಜ ಸೇವಕರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್. ದೀಪಕ್, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಗೌರವವಿದೆ. ಮಹಿಳೆಯರು ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು, ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು. ಭಾರತ ಮಾತೆ, ಕನ್ನಡ ತಾಯಿ ಭುವನೇಶ್ವರಿ, ಹೆತ್ತ ತಾಯಿ, ಹೊತ್ತ ಭೂಮಿಯನ್ನು ಹೆಣ್ಣಿನ ರೂಪದ ದೇವರೆಂದು ಪೂಜಿಸಿ ಗೌರವಿಸುವ ಸಂಸ್ಕೃತಿ ನಮ್ಮದು. ಇಂತಹ ವಿಶೇಷ ಆಚಾರ ವಿಚಾರಗಳನ್ನು ಹೊಂದಿರುವ ಭಾರತೀಯ ಸಂಸ್ಕೃತಿಯನ್ನು ತಮ್ಮ ಮಕ್ಕಳಿಗೆ ಪರಿಚಯಿಸುವ ಮೂಲಕ ಉಳಿಸಿ, ಬೆಳೆಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಮಹಿಳೆಯರನ್ನು ಗೌರವಿಸುವ ಕೆಲಸವನ್ನು ವಿಜಯಸೇನೆ ಮಾಡುತ್ತಾ ಬಂದಿದೆ. ಮಹಿಳಾ ಸೈನಿಕರ ಪಡೆ ಕಟ್ಟಿ ಮರಾಠರ ವಿರುದ್ಧ ಹೋರಾಟ ಮಾಡಿದ ಬೆಳವಾಡಿ ಮಲ್ಲಮ್ಮನ ಶೌರ್ಯದ ಪ್ರತೀಕವಾಗಿ ವಿಜಯಸೇನೆ 5 ವರ್ಷದಿಂದ ಅವರ ಹೆಸರಿನಲ್ಲಿ ಸಾಧಕ ಮಹಿಳೆಯರಿಗೆ ಪ್ರಶಸ್ತಿ ನೀಡಿ ಉತ್ಸಾಹ ತುಂಬುವ ಕಾರ್ಯ ಮಾಡುತ್ತಿದೆ ಎಂದು ಹೆಚ್.ಎನ್. ದೀಪಕ್ ತಿಳಿಸಿದರು.
ಕರುನಾಡು ವಿಜಯಸೇನೆಯು ಹೋರಾಟದ ಜೊತೆಗೆ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ರಾಜ್ಯದ ೫೦೦ ಕನ್ನಡ ಶಾಲೆಗಳಿಗೆ ಬಣ್ಣ ಹೊಡೆಸುವ ಕೆಲಸ ಆರಂಭಿಸಿ ಈಗ ೧೩೦ ಶಾಲೆಗಳನ್ನು ಪೂರ್ಣಗೊಳಿಸಲಾಗಿದೆ. ಸರಳ ಸಾಮೂಹಿಕ ವಿವಾಹ, ಉದ್ಯೋಗ ಮೇಳ, ಆರೋಗ್ಯ ಶಿಬಿರ, ಉತ್ತಮ ಶಿಕ್ಷಕರಿಗೆ ಗೌರವಾರ್ಪಣೆಯಂತಹ ಕಾರ್ಯಕ್ರಮಗಳನ್ನು ವಿಜಯಸೇನೆಯಿಂದ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಟಿ.ಎಸ್. ಸಿದ್ಧಗಂಗಾ ರುದ್ರೇಶ್ ಕಾರ್ಯಕ್ರಮ ಉದ್ಘಾಟಿಸಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸಿ ಯಶಸ್ವಿಯಾಗುತ್ತಿದ್ದಾರೆ. ಇತರೆ ಮಹಿಳೆಯರಿಗೆ ಅವರು ಪ್ರೇರಣೆ ಆಗಬೇಕು. ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಛಲ ಬೆಳೆಸಿಕೊಂಡು ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ವಿಜಯಸೇನೆ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಗಂಗರಾಜಮ್ಮ ಮಾತನಾಡಿ, ವಿವಿಧ ಕಾರ್ಯಕ್ರಮಗಳ ಮೂಲಕ ವಿಜಯಸೇನೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ, ಶಕ್ತಿ ತುಂಬುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಿಳೆಯರು ತಮ್ಮ ಶಕ್ತಿ ಏನೆಂಬುದನ್ನು ಮೊದಲು ತಿಳಿದು ತಕ್ಕಂತೆ ಸಾಧನೆ ಮಾಡಿ ಯಶಸ್ಸು ಕಾಣಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಂಶುಪಾಲರಾದ ಪ್ರೊ. ಟಿ.ಆರ್. ಲೀಲಾವತಿ ಅವರು ಬೆಳವಾಡಿ ಮಲ್ಲಮ್ಮ ಮಹಿಳಾ ಸೈನ್ಯ ಕಟ್ಟಿ ಮರಾಠರ ವಿರುದ್ಧ ಸಮರ ಸಾರಿದ ಇತಿಹಾಸ, ಆಕೆಯ ಶೌರ್ಯ, ಪರಾಕ್ರಮ ಪರಿಚಯಿಸಿದರು. ಮಲ್ಲಮ್ಮ, ಒನಕೆ ಓಬವ್ವ, ಕಿತ್ತೂರ ರಾಣಿ ಚೆನ್ನಮ್ಮ ಅಂತಹ ಸಾಹಸಿ ಮಹಿಳೆಯರು ನಮಗೆಲ್ಲಾ ಸ್ಫೂರ್ತಿ ಆಗಬೇಕು ಎಂದು ಹೇಳಿದರು.
ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಯಾಸ್ಮೀನ್ ತಾಜ್, ಮೈತ್ರಿ ಸಂಘದ ಅಧ್ಯಕ್ಷೆ ಗಂಗಾ ಪರಮೇಶ್, ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್, ರಾಜ್ಯ ಕಾರ್ಯದರ್ಶಿ ರಾಧಾ ಗಂಗಾಧರ್, ಡಾ. ಪ್ರಿಯದರ್ಶಿನಿ, ವತ್ಸಲಾ, ಲತಾ, ಮೀನಾ, ಕಾವ್ಯ, ವಿಜಯಸೇನೆ ಜಿಲ್ಲಾಧ್ಯಕ್ಷ ಗಂಗಾಧರ್, ರಾಜ್ಯ ಕಾರ್ಯದರ್ಶಿ ರಂಜನ್, ಹರೀಶ್ ಸೇರಿದಂತೆ ಮಹಿಳಾ ಘಟಕದ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ವಿಜಯಸೇನೆ ಪದಾಧಿಕಾರಿಗಳು ಬಳೆ, ಅರಿಷಿಣ, ಕುಂಕುಮ ಕೊಟ್ಟು ಬರಮಾಡಿಕೊಂಡರು.
PublicNext
28/04/2026 08:51 am