ತಿರುವನಂತಪುರಂ: ದೇವರ ನಾಡಿನಲ್ಲಿ ದಶಕಗಳಿಂದ ನೆಲೆ ಕಂಡುಕೊಳ್ಳಲು ಹೋರಾಡುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಈ ಬಾರಿಯ ವಿಧಾನಸಭಾ ಚುನಾವಣೆ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದೆ.
ಕೇರಳದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಸಾಂಪ್ರದಾಯಿಕ ರಾಜಕಾರಣಕ್ಕೆ ಸವಾಲೆಸೆದು ಪ್ರಬಲ 'ಮೂರನೇ ಶಕ್ತಿ'ಯಾಗಿ ಹೊರಹೊಮ್ಮಿದೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ನೇಮಮ್ ಕ್ಷೇತ್ರದಲ್ಲಿ, ಬಿ.ಬಿ. ಗೋಪಕುಮಾರ್ ಚಾತನ್ನೂರಿನಲ್ಲಿ ಹಾಗೂ ಮಾಜಿ ಕೇಂದ್ರ ಸಚಿವ ಮುರಳೀಧರನ್ ಕಳಕುಟ್ಟಂನಿಂದ ವಿಜಯ ಸಾಧಿಸಿದ್ದಾರೆ. ಇದು ಪಕ್ಷದ ಪಾಲಿಗೆ ಅತ್ಯಂತ ಯಶಸ್ವಿ ವಿಧಾನಸಭಾ ಚುನಾವಣೆಯಾಗಿದೆ.
ಕೇರಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತಳಮಟ್ಟದಿಂದ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. 2016ರಲ್ಲಿ ಓ. ರಾಜಗೋಪಾಲ್ ಅವರು ನೇಮಮ್ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿಗೆ ಕೇರಳ ವಿಧಾನಸಭೆ ಪ್ರವೇಶಿಸಿತ್ತು. ಆದರೆ, 2021ರ ಚುನಾವಣೆಯಲ್ಲಿ ಪಕ್ಷವು ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ನಡೆದ ಚುನಾವಣಾ ಯಶಸ್ಸನ್ನು ಗಮನಿಸಿದರೆ, ಪಕ್ಷದ ಬೆಳವಣಿಗೆ ಸ್ಪಷ್ಟವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರು ತ್ರಿಶೂರ್‌ನಿಂದ ಗೆಲ್ಲುವ ಮೂಲಕ ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ಸೃಷ್ಟಿಸಿದ್ದರು. ಇದಕ್ಕೂ ಮುನ್ನ, ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 101 ವಾರ್ಡ್‌ಗಳ ಪೈಕಿ 50 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರಕ್ಕೆ ಏರಿತ್ತು.
ಕೇರಳದ ಸಾಂಪ್ರದಾಯಿಕ ಎಲ್‌ಡಿಎಫ್ (ಎಡ ಪ್ರಜಾಸತ್ತಾತ್ಮಕ ರಂಗ) ಮತ್ತು ಯುಡಿಎಫ್ (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ರಾಜಕಾರಣದ ನಡುವೆ ಬಿಜೆಪಿ ಈಗ ಬಲವಾದ 'ಮೂರನೇ ಶಕ್ತಿ'ಯಾಗಿ ಉದಯಿಸಿದೆ. ತಳಮಟ್ಟದ ಸಂಘಟನೆ ಮತ್ತು ಪ್ರಮುಖ ನಾಯಕರ ವರ್ಚಸ್ಸು ದಕ್ಷಿಣದ ಈ ರಾಜ್ಯದಲ್ಲಿ ಕಮಲ ಅರಳಲು ಪ್ರಮುಖ ಕಾರಣಗಳಾಗಿವೆ. ಈ ಐತಿಹಾಸಿಕ ಗೆಲುವು ಮುಂದಿನ ದಿನಗಳಲ್ಲಿ ಕೇರಳ ರಾಜಕಾರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆಯಾಗಿದೆ.
PublicNext
04/05/2026 07:02 pm