ಹಾಸನ : ಪಂಚ ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸಾಧಿಸಿದ ಗಮನಾರ್ಹ ಜಯದ ಹಿನ್ನೆಲೆಯಲ್ಲಿ, ಸಕಲೇಶಪುರ ಮಂಡಲ ಬಿಜೆಪಿ ವತಿಯಿಂದ ಭರ್ಜರಿ ವಿಜಯೋತ್ಸವವನ್ನು ಆಚರಿಸಲಾಯಿತು. ಶಾಸಕರ ಹಾಗೂ ಮಂಡಲ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕರ್ತರು ಸಿಹಿ ಹಂಚಿಕೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಸಿಮೆಂಟ್ ಮಂಜು ಅವರು, “ಸಂಸ್ಥಾಪಕರ ನೆಲದಲ್ಲಿ ಜಯ ಸಾಧಿಸಿರುವುದು ಅಪಾರ ಸಂತೋಷವನ್ನು ತಂದಿದೆ. ಈ ವಿಜಯಕ್ಕೆ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ, ದೇಶದ ಪ್ರಧಾನಮಂತ್ರಿಗಳಿಗೂ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ,” ಎಂದು ಹೇಳಿದರು.
ಅವರು ಮುಂದುವರೆದು, “ಹಿಂದಿನ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ‘ನಾವು ಎಲ್ಲೆಡೆ ಜಯ ಸಾಧಿಸಿದರೂ, ಕೊಲ್ಕತ್ತಾದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ’ ಎಂಬ ಅಳಲನ್ನು ವ್ಯಕ್ತಪಡಿಸಿದ್ದರು. ಅದು ನಮ್ಮ ಸಂಸ್ಥಾಪಕರ ನೆಲವಾಗಿದ್ದರಿಂದ ವಿಶೇಷ ಮಹತ್ವ ಹೊಂದಿತ್ತು. ಆ ಸಂಕಲ್ಪವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಡೇರಿಸಿದ್ದಾರೆ,” ಎಂದು ಹೇಳಿದರು.
ಇನ್ನೂ, ಕೊಲ್ಕತ್ತಾದಲ್ಲಿ ನಡೆಯುತ್ತಿದ್ದ ಅನ್ಯಾಯಗಳು, ಅಪರಾಧಗಳು ಮತ್ತು ಅಕ್ರಮ ಚಟುವಟಿಕೆಗಳಿಗೆ ಈಗ ಕಡಿವಾಣ ಬಿದ್ದಿರುವುದು ಸಂತೋಷದ ವಿಷಯ ಎಂದು ಅವರು ಅಭಿಪ್ರಾಯಪಟ್ಟರು.
ಈ ವಿಜಯೋತ್ಸವದಲ್ಲಿ ಅನೇಕ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದು, ಪಕ್ಷದ ಮುಂದಿನ ಬೆಳವಣಿಗೆಗಳ ಕುರಿತು ಆಶಾವಾದ ವ್ಯಕ್ತಪಡಿಸಿದರು.
PublicNext
05/05/2026 03:29 pm
LOADING...