ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರು ಎಣಿಕೆಯಿಂದ ಪ್ರಮಾಣ ವಚನದವರೆಗೆ: ಡಿ.ಎನ್. ಜೀವರಾಜ್ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆಯಲ್ಲಿ ರೋಚಕ ಜಯ ಸಾಧಿಸಿದ್ದ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಅವರು ಕೊನೆಗೂ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದು (ಮೇ 6) ವಿಧಾನಸೌಧದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ, ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಸುಖಾಂತ್ಯ ಸಿಕ್ಕಂತಾಗಿದೆ.

ವಿಧಾನಸೌಧದ ಮೊದಲ ಮಹಡಿಯಲ್ಲಿ ನಡೆದ ಈ ಸಮಾರಂಭದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಡಿ.ಎನ್. ಜೀವರಾಜ್ ಅವರಿಗೆ ಶಾಸಕರಾಗಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ಕಾರ್ಯದರ್ಶಿ ವಿಶಲಾಕ್ಷಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಾಸ್ತವವಾಗಿ, ಇಂದು ಮಧ್ಯಾಹ್ನ 3:30ಕ್ಕೆ ಪ್ರಮಾಣ ವಚನಕ್ಕೆ ಸಮಯ ನಿಗದಿಯಾಗಿತ್ತು. ಅದರಂತೆ ಜೀವರಾಜ್ ಅವರು ವಿಧಾನಸೌಧಕ್ಕೆ ಆಗಮಿಸಿ ನಿರೀಕ್ಷೆಯಲ್ಲಿದ್ದರು. ಆದರೆ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅರ್ಧ ಗಂಟೆ ವಿಳಂಬವಾಗಿ ಆಗಮಿಸಿದ ಕಾರಣ, ರಾಜಕೀಯ ವಲಯದಲ್ಲಿ ಸಣ್ಣ ಮಟ್ಟದ ಕುತೂಹಲ ಮತ್ತು ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೂ ಸಭಾಧ್ಯಕ್ಷರು ಆಗಮಿಸಿ ವಿಧಿವಿಧಾನಗಳನ್ನು ಪೂರೈಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಎನ್. ಜೀವರಾಜ್, "ಇದು ಸತ್ಯಕ್ಕೆ ಸಿಕ್ಕ ಜಯ. ನ್ಯಾಯಾಲಯ ಮತ್ತು ಪ್ರಜಾಪ್ರಭುತ್ವದ ಮೇಲೆ ನನಗಿದ್ದ ನಂಬಿಕೆ ಗೆದ್ದಿದೆ" ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಎನ್. ಜೀವರಾಜ್ ಅವರು ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶದಂತೆ ಕಳೆದ ವಾರಾಂತ್ಯದಲ್ಲಿ ಅಂಚೆ ಮತಗಳ ಮರು ಎಣಿಕೆ ನಡೆಸಲಾಯಿತು. ಈ ಮರು ಎಣಿಕೆಯ ಬಳಿಕ ಡಿ.ಎನ್. ಜೀವರಾಜ್ ಅವರು ತಮ್ಮ ಪ್ರತಿಸ್ಪರ್ಧಿಗಿಂತ 52 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಚುನಾವಣಾ ಆಯೋಗ ಘೋಷಿಸಿತು.

ಮರು ಎಣಿಕೆಯಲ್ಲಿ ಗೆದ್ದಿದ್ದರೂ, ಪ್ರಮಾಣ ವಚನ ಬೋಧಿಸಲು ಸಭಾಧ್ಯಕ್ಷರು ವಿಳಂಬ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸಭಾಧ್ಯಕ್ಷರು ಲಭ್ಯವಿಲ್ಲದಿದ್ದರೆ ತಾವೇ ಪ್ರಮಾಣ ವಚನ ಬೋಧಿಸಬೇಕು ಎಂದು ಮನವಿ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ, ಇಂದು ಡಿ.ಎನ್. ಜೀವರಾಜ್ ಅಧಿಕೃತವಾಗಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Edited By : Nirmala Aralikatti
PublicNext

PublicNext

06/05/2026 05:19 pm

Cinque Terre

5.17 K

Cinque Terre

0

ಸಂಬಂಧಿತ ಸುದ್ದಿ