ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರ ಸಂಪುಟಕ್ಕೆ ನಿತೀಶ್ ಪುತ್ರನ ಎಂಟ್ರಿ: ಗಾಂಧಿ ಮೈದಾನದಲ್ಲಿ ಗುರುವಾರ ನಿಶಾಂತ್ ಕುಮಾರ್ ಪ್ರಮಾಣ ವಚನ

ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಬದಲಾವಣೆ ಗಾಳಿ ಬೀಸುತ್ತಿದೆ. ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಸಚಿವರಾಗಿ ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಈ ಅದ್ಧೂರಿ ಸಮಾರಂಭ ನಡೆಯಲಿದೆ.

ಇಷ್ಟು ದಿನ ಸಕ್ರಿಯ ರಾಜಕಾರಣದಿಂದ ದೂರವಿದ್ದ ನಿಶಾಂತ್ ಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಜನತಾದಳ (ಯುನೈಟೆಡ್) ನಾಯಕರು ತಡರಾತ್ರಿಯವರೆಗೆ ಸುದೀರ್ಘ ಸಭೆ ನಡೆಸಿದ್ದರು. ಆರಂಭದಲ್ಲಿ ರಾಜಕೀಯಕ್ಕೆ ಬರಲು ಹಿಂದೇಟು ಹಾಕಿದ್ದ ನಿಶಾಂತ್, ಹಿರಿಯ ನಾಯಕರ ಒತ್ತಾಯ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೊನೆಗೂ ಸಚಿವ ಸ್ಥಾನ ಸ್ವೀಕರಿಸಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸ್ಥಾನದ ಹಿನ್ನೆಲೆಯಲ್ಲಿ, ಮೇ 7 ರಂದು ನಿಗದಿಯಾಗಿದ್ದ ನಿಶಾಂತ್ ಕುಮಾರ್ ಅವರ 'ಸದ್ಭಾವನಾ ಯಾತ್ರೆ'ಯನ್ನು ರದ್ದುಗೊಳಿಸಲಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿದ್ದ ಅವರು, ಪ್ರಮಾಣ ವಚನ ಮುಗಿದ ನಂತರ ಮೇ 9 ರಿಂದ ಮತ್ತೆ ಯಾತ್ರೆಯನ್ನು ಮುಂದುವರಿಸಲಿದ್ದಾರೆ.

ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಈ ಸರ್ಕಾರದಲ್ಲಿ ಒಟ್ಟು 27 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಬಿಜೆಪಿ, ಜೆಡಿಯು, ಎಲ್‌ಜೆಪಿ (ರಾಮ್ ವಿಲಾಸ್), ಹಮ್ (HAM) ಮತ್ತು ಆರ್‌ಎಲ್‌ಜೆಪಿ ಪಕ್ಷಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿದೆ.

ಹೊಸ ಮುಖಗಳು: ಹಲವು ಹಿರಿಯ ನಾಯಕರ ಜೊತೆಗೆ ಈ ಬಾರಿ ಯುವ ಮತ್ತು ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ.

ಕೇಂದ್ರ ಸಚಿವ ರಾಜೀವ ರಂಜನ್ ಸಿಂಗ್ ಸೇರಿದಂತೆ ಹಲವು ಪ್ರಭಾವಿ ನಾಯಕರು ಈಗಾಗಲೇ ಪಾಟ್ನಾಗೆ ಆಗಮಿಸಿದ್ದು, ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ತನ್ನ ತಂದೆಯ ರಾಜಕೀಯ ಪರಂಪರೆಯನ್ನು ಮುಂದುವರಿಸಲು ನಿಶಾಂತ್ ಕುಮಾರ್ ಸಜ್ಜಾಗಿದ್ದು, ಅವರ ಈ ಹೊಸ ಇನ್ನಿಂಗ್ಸ್ ಬಿಹಾರ ರಾಜಕಾರಣದಲ್ಲಿ ಭಾರಿ ಕುತೂಹಲ ಕೆರಳಿಸಿದೆ.

Edited By : Nagaraj Tulugeri
PublicNext

PublicNext

06/05/2026 06:30 pm

Cinque Terre

5.32 K

Cinque Terre

1

ಸಂಬಂಧಿತ ಸುದ್ದಿ