ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿವಿಕೆಗೆ ಕಾಂಗ್ರೆಸ್ ಬೆಂಬಲ - ಇದು ಜನಾದೇಶಕ್ಕೆ ವಿರುದ್ಧ ಎಂದ ಡಿಎಂಕೆ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿರುವ ಕ್ರಮಕ್ಕೆ ಡಿಎಂಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್‌ನ ಈ ನಡೆ ಜನಮತದ ವಿರುದ್ಧವಾಗಿದ್ದು, ಮೈತ್ರಿ ರಾಜಕಾರಣದಲ್ಲಿ ಆತಂಕದ ಅಲೆಗಳನ್ನು ಎಬ್ಬಿಸಲಿದೆ ಎಂದು ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಆರೋಪಿಸಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಈ ನಿರ್ಧಾರ 'ಸಮೀಪದೃಷ್ಟಿಯ ರಾಜಕೀಯ ನಿರ್ಧಾರ'ವಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕಾಗಿ ಕಾಂಗ್ರೆಸ್ ವಿಷಾದಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. "2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ವಿಶ್ವಾಸ ನಮಗಿದೆ. ಆದರೆ ಕಾಂಗ್ರೆಸ್‌ನ ಇತ್ತೀಚಿನ ನಡೆ ಅದನ್ನು ಅಸ್ಥಿರ ಮೈತ್ರಿ ಪಾಲುದಾರರನ್ನಾಗಿ ಮಾಡಿದೆ. ಕಾಂಗ್ರೆಸ್ ವಿಶ್ವಾಸಕ್ಕೆ ಯೋಗ್ಯವಲ್ಲ ಎಂಬ ಭಾವನೆ ದೇಶದಾದ್ಯಂತ ಮೂಡುತ್ತಿದೆ" ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಈ ನಡೆಯನ್ನು "ಬೆನ್ನಿಗೆ ಇರಿತ" ಎಂದು ಡಿಎಂಕೆ ಪರಿಗಣಿಸಿದೆ ಎಂದು ಸರವಣನ್ ಅಣ್ಣಾದುರೈ ತೀವ್ರವಾಗಿ ಟೀಕಿಸಿದ್ದಾರೆ. ಟಿವಿಕೆಗೆ ಬೆಂಬಲ ನೀಡಲು ಕಾಂಗ್ರೆಸ್ ನೀಡುತ್ತಿರುವ ಕಾರಣಗಳು ಒಪ್ಪುವಂತಿಲ್ಲ. ಬಿಜೆಪಿಯನ್ನು ಮತ್ತು ಅದರ ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಕಾಂಗ್ರೆಸ್ ಹೇಳುತ್ತಿದ್ದರೂ, ಇದು ಕೇವಲ ಅವರ 'ರಾಜಕೀಯ ಲೆಕ್ಕಾಚಾರದ ನಿರ್ಧಾರ' ಎಂದು ಡಿಎಂಕೆ ವಕ್ತಾರರು ಆರೋಪಿಸಿದರು. ಫಲಿತಾಂಶ ಪ್ರಕಟವಾದ ಒಂದೇ ದಿನದಲ್ಲಿ ಕಾಂಗ್ರೆಸ್ ತನ್ನ ನಿಲುವು ಬದಲಿಸಿರುವುದು ಜನಮತದ ವಿರುದ್ಧವಾಗಿ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಎಂದರು.

"ಈ ಕ್ರಮವು ದೇಶದ ಇತರ ಮೈತ್ರಿ ಪಕ್ಷಗಳಲ್ಲಿಯೂ ಆತಂಕವನ್ನು ಸೃಷ್ಟಿಸಲಿದೆ. ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ ಸೇರಿದಂತೆ ಇತರ ವಿರೋಧ ಪಕ್ಷಗಳ ನಾಯಕರ ಮೇಲೂ ಇದರ ಪರಿಣಾಮ ಬೀಳಲಿದೆ" ಎಂದು ಅಣ್ಣಾದುರೈ ಎಚ್ಚರಿಸಿದರು. "ನಾವು ಯಾವತ್ತೂ ಕಾಂಗ್ರೆಸ್‌ಗೆ ದ್ರೋಹ ಮಾಡಿಲ್ಲ. ಆದರೆ ಕಾಂಗ್ರೆಸ್ ಕೈಗೊಂಡಿರುವ ಈ ನಿರ್ಧಾರ ಮೈತ್ರಿ ರಾಜಕಾರಣದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ" ಎಂದು ಅಣ್ಣಾದುರೈ ಸ್ಪಷ್ಟಪಡಿಸಿದರು.

Edited By : Nagaraj Tulugeri
PublicNext

PublicNext

06/05/2026 07:06 pm

Cinque Terre

8.66 K

Cinque Terre

1