ಚೊಚ್ಚಲ ಬಾರಿಗೆ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ನಟ ಜೋಸೆಫ್ ವಿಜಯ್ ಅವರ ಹೊಸ ಪಕ್ಷ ಟಿವಿಕೆ, ಎಲ್ಲರ ನಿರೀಕ್ಷೆ ಮೀರಿ ಭರ್ಜರಿ ಗೆಲುವು ಸಾಧಿಸಿತ್ತು. ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚನೆಗೆ ಅಗತ್ಯವಾದ 118 ಸ್ಥಾನಗಳ ಬಹುಮತವನ್ನು ಟಿವಿಕೆ ಪಡೆಯುವಲ್ಲಿ ವಿಫಲವಾಗಿತ್ತು. ಹೀಗಾಗಿ, ವಿಜಯ್ ಅನಿವಾರ್ಯವಾಗಿ ಇತರ ಪಕ್ಷಗಳ ಬೆಂಬಲ ಕೋರಿದ್ದರು.
ಕಾಂಗ್ರೆಸ್ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ, ವಿಜಯ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದರು. ಆದರೆ, ಮೂಲಗಳ ಪ್ರಕಾರ, ತಮಿಳುನಾಡಿನ ರಾಜ್ಯಪಾಲರು ವಿಜಯ್ ಮಂಡಿಸಿದ ಬಹುಮತದ ಲೆಕ್ಕಾಚಾರದಿಂದ ತೃಪ್ತರಾಗಿಲ್ಲ. ಈ ಕಾರಣದಿಂದ ನಾಳೆ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಒಟ್ಟು 118 ಶಾಸಕರ ಬೆಂಬಲ ಅಗತ್ಯವಿದೆ. ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿತ್ತು. ಸರ್ಕಾರ ರಚನೆಗೆ ಇನ್ನೂ 10 ಸ್ಥಾನಗಳ ಕೊರತೆ ಇದ್ದ ಕಾರಣ, ವಿಜಯ್ ಇತರ ಪಕ್ಷಗಳ ಬೆಂಬಲವನ್ನು ಯಾಚಿಸಿದ್ದರು. ಈ ಸಂದರ್ಭದಲ್ಲಿ, ಡಿಎಂಕೆ ಜೊತೆಗಿನ 55 ವರ್ಷಗಳ ಮೈತ್ರಿಯನ್ನು ಮುರಿದುಕೊಂಡಿದ್ದ ಕಾಂಗ್ರೆಸ್, ಟಿವಿಕೆಗೆ ಬೆಂಬಲ ನೀಡಲು ಸಮ್ಮತಿಸಿತ್ತು. ಆದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಗೆದ್ದಿರುವ ಸ್ಥಾನಗಳು ಕೇವಲ 5. ಇದರಿಂದ ಟಿವಿಕೆ ಪಕ್ಷದ ಒಟ್ಟು ಬೆಂಬಲ 113ಕ್ಕೆ ಏರಿಕೆಯಾದರೂ, ಸರ್ಕಾರ ರಚನೆಗೆ ಇನ್ನೂ 5 ಶಾಸಕರ ಬೆಂಬಲದ ಅಗತ್ಯವಿದೆ.
PublicNext
06/05/2026 07:25 pm
LOADING...