ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಂಆರ್‌ಪಿಎಲ್ ಸಂತ್ರಸ್ತರ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ನಡೆಯಲಿ- ನಾಗರಿಕರ ಆಗ್ರಹ

ಮಂಗಳೂರು: ಎಂಆರ್‌ಪಿಎಲ್‌ 3ನೇ ಹಂತದ ಕೋಕ್‌ ಸಲ್ಫರ್‌ ಘಟಕದ ಮಾರಕ ಮಾಲಿನ್ಯದಿಂದ ಜೋಕಟ್ಟೆ, ಕಳವಾರು, ಕೆಂಜಾರು ಪ್ರದೇಶದ ಗ್ರಾಮಸ್ಥರ ಬದುಕು ನರಕ ಸದೃಶವಾಗಿದೆ. ಈ ನಡುವೆ ಜನವಸತಿ ಪ್ರದೇಶ ಮತ್ತು ಕಂಪೆನಿಯ ನಡುವಿನ 27ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಹಸಿರು ವಲಯ ನಿರ್ಮಿಸುವ ಯೋಜನೆ ಕೊನೆಯ ಹಂತಕ್ಕೆ ಬಂದಿತ್ತು. ಸದ್ಯ ಮಾಲಿನ್ಯ ಪ್ರದೇಶದಿಂದ ಮುಕ್ತರಾಗುತ್ತೇವೆ ಎಂದು ಜನರು ಕನಸು ಕಾಣುತ್ತಿರುವಾಗಲೇ ಕಂಪೆನಿಯ ನಿರಾಸಕ್ತಿಯಿಂದ ಭೂಸಾಧ್ವೀನ ಪ್ರಕ್ರಿಯೆ ಈಗ ನೆನೆಗುದಿಗೆ ಬಿದ್ದಿದೆ. ಪರಿಣಾಮ ಈ ಭಾಗದ ಮಂದಿಗೆ ದಿಕ್ಕೇ ತೋಚದಂತಾಗಿದೆ.

ಸತತ ಹೋರಾಟದ ಬಳಿಕ 2016ರಲ್ಲಿ ಕೋಕ್‌ ಸಲ್ಫರ್‌ ಘಟಕದ ಮಾಲಿನ್ಯಕ್ಕೆ ತಡೆ ನೀಡಲು ಆರು ಅಂಶಗಳ ಕ್ರಮಗಳನ್ನು ಕೈಗೊಳ್ಳಲು ಕಂಪನಿಗೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರಲ್ಲಿ ಐದು ಅಂಶಗಳನ್ನು ಕಂಪೆನಿಯು ಭಾಗಶಃ ಜಾರಿಗೊಳಿಸಿದೆ. ಆದರೂ ಶಬ್ಧ, ವಾಯುಮಾಲಿನ್ಯದ ಪ್ರಮಾಣ ಕಡಿಮೆ ಆಗಿಲ್ಲ. ಇಲ್ಲಿನ ಹಾರುಬೂದಿ, ಕೊಳಚೆ ನೀರಿನ ಪರಿಣಾಮ ಇಲ್ಲಿನ ಜನರು ಚರ್ಮರೋಗ, ಕ್ಯಾನ್ಸರ್, ಉಸಿರಾಟದ ತೊಂದರೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ಆರೋಪಗಳಿದೆ.

ಸದ್ಯ ಆರು ಅಂಶಗಳ ಆದೇಶಗಳ ಪೈಕಿ ಎಂಆರ್‌ಪಿಎಲ್ ಸಂಸ್ಥೆ ಹಾಗೂ ಗ್ರಾಮಗಳ ಜನವಸತಿ ನಡುವಿನ ಹೆಚ್ಚು ಭಾದಿತ ಪ್ರದೇಶದಲ್ಲಿ 27ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಹಸಿರು ವಲಯ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಜಮೀನು, ವಸತಿ ಕಳೆದುಕೊಳ್ಳುವವರಿಗೆ ಕೈಗಾರಿಕಾ ಭೂಸ್ವಾಧೀನದ ನಿಯಮದಂತೆ ಪುನರ್ವಸತಿ ಕಲ್ಪಿಸುವುದು ಅತ್ಯಂತ ಮಹತ್ವದ ಅಂಶವಾಗಿತ್ತು.

ಈ ವರ್ಷ ಫೆ.4ರಂದು ಜಿಲ್ಲೆಯ ಸಂಸದರು, ಮೂಡುಬಿದಿರೆ ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಪ್ಯಾಕೇಜ್‌ ಅಂತಿಮಗೊಂಡಿತ್ತು. ಗರಿಷ್ಠ 2 ತಿಂಗಳ ಅವಧಿಯಲ್ಲಿ ಭೂ ಸ್ವಾಧೀನ ಆರಂಭಿಸುವುದು, ಮಳೆಗಾಲ ಆರಂಭದ ಮೊದಲು ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು. ಆದರೆ ಇದೀಗ ಎಂಆರ್‌ಪಿಎಲ್‌ ಭೂಸ್ವಾಧೀನ ಪ್ರಕ್ರಿಯೆಯನ್ನು ವಿಳಂಬ ಮಾಡಿದೆ. ಇದರಿಂದಾಗಿ ಕೈಗಾರಿಕಾ ಮಾಲಿನ್ಯದಿಂದ ಸಂತ್ರಸ್ಥರಾಗಿರುವ ಗ್ರಾಮಸ್ಥರ ಬದುಕು ನರಕ ಸದೃಶವಾಗಿ ಮುಂದುವರಿಯುವಂತಾಗಿದೆ.

ಭೂಸ್ವಾಧೀನ ಪ್ರಕ್ರಿಯೆಯನ್ವಯ ಈ ಪ್ರದೇಶಗಳ ಮನೆಗಳನ್ನು ದುರಸ್ತಿ ಮಾಡುವಂತಿಲ್ಲ. ಪರಿಣಾಮ ಕಳೆದ ವರ್ಷ ಇಲ್ಲಿನ ಎರಡು ಮೂರು ಮನೆಗಳು ಕುಸಿದುಬಿದ್ದು ಒಂದು ಸಾವು ಸಂಭವಿಸಿತ್ತು. ಇನ್ನೇನು ಈ ವರ್ಷದ ಮಳೆ ಆರಂಭವಾಗಲಿದ್ದು, ಜನತೆ ಮನೆ, ಕಾಂಪೌಂಡ್‌ಗಳು ಕುಸಿಯುವ ಭೀತಿಯಲ್ಲಿದ್ದಾರೆ‌.

ಆದ್ದರಿಂದ ಹಿಂದೆ ನೀಡಿದ ಭರವಸೆಯಂತೆ ಕಂಪೆನಿ ಹಾಗೂ ಜಿಲ್ಲಾಡಳಿತ ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ಒಂದು ಬಾರಿಗೆ ನಗದು ಪ್ಯಾಕೇಜ್‌ ನೀಡುವ ಮೊದಲಿನ ತೀರ್ಮಾನದಂತೆ ಜಿಲ್ಲಾಡಳಿತದ ಮೂಲಕವೇ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು. ಇಲ್ಲದಿದ್ದಲ್ಲಿ ತಾವು ಪ್ರಾರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಜನರು ಆಗ್ರಹಿಸಿದ್ದಾರೆ.

Edited By :
PublicNext

PublicNext

19/05/2026 07:43 pm

Cinque Terre

22.25 K

Cinque Terre

0

ಸಂಬಂಧಿತ ಸುದ್ದಿ