ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ನೋವಿರೋ ಹಲ್ಲು ಬಿಟ್ಟು ಆರೋಗ್ಯವಾಗಿದ್ದ ಹಲ್ಲು ಕಿತ್ತ ಲೇಡಿ ಡಾಕ್ಟರ್! ಆಸ್ಪತ್ರೆಯಲ್ಲಿ ರೋಗಿ ಸಂಬಂಧಿಕರ ಧರಣಿ!

ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಜವಾಹರಲಾಲ್ ನೆಹರು ಆಸ್ಪತ್ರೆಯ ದಂತ ಚಿಕಿತ್ಸಾ ವಿಭಾಗದಲ್ಲಿ ಭೀಕರ ನಿರ್ಲಕ್ಷ್ಯದ ಘಟನೆಯೊಂದು ನಡೆದಿದ್ದು, ಭಾರಿ ಗದ್ದಲಕ್ಕೆ ಕಾರಣವಾಗಿದೆ. ನೋವಿನಿಂದ ನರಳುತ್ತಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡುವ ಭರದಲ್ಲಿ ವೈದ್ಯರು, ಹಾಳಾಗಿದ್ದ ಹಲ್ಲನ್ನು ಬಿಟ್ಟು ಚೆನ್ನಾಗಿದ್ದ ಮತ್ತೊಂದು ಹಲ್ಲನ್ನು ಕಿತ್ತುಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ರೋಗಿ ಮತ್ತು ಆಕೆಯ ಕುಟುಂಬಸ್ಥರು ಆಸ್ಪತ್ರೆಯಲ್ಲೇ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಅಜ್ಮೀರ್‌ನ ನಾಗ್‌ಫಣಿ ನೈ ಸಡಕ್ ನಿವಾಸಿ ಶಬಾನಾ ಖಾನ್ ಎಂಬುವವರು ಕಳೆದ ಎರಡು ತಿಂಗಳಿನಿಂದ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಈ ಹಿಂದೆ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ, ಒಂದು ಹಲ್ಲು ಸಂಪೂರ್ಣವಾಗಿ ಹಾಳಾಗಿದ್ದು ಅದನ್ನು ಕಿತ್ತುಹಾಕಬೇಕಾಗುತ್ತದೆ ಎಂದು ಸಲಹೆ ನೀಡಿದ್ದರು. ಅದರಂತೆ ಶುಕ್ರವಾರ ಶಬಾನಾ ಅವರು ತಮ್ಮ ಪತಿಯೊಂದಿಗೆ ಹಲ್ಲು ಕಿತ್ತಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು.

ಆದರೆ, ಚಿಕಿತ್ಸೆ ನೀಡುತ್ತಿದ್ದ ಮಹಿಳಾ ವೈದ್ಯರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಬಾನಾ ಆರೋಪಿಸಿದ್ದಾರೆ. "ಡಾಕ್ಟರ್ ಚಿಕಿತ್ಸೆ ನೀಡುವಾಗ ತಮ್ಮ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಹರಟೆ ಹೊಡೆಯುವುದರಲ್ಲಿ ಬ್ಯುಸಿಯಾಗಿದ್ದರು. ಅವರು ತಪ್ಪು ಹಲ್ಲನ್ನು ಕೀಳುತ್ತಿರುವುದನ್ನು ಗಮನಿಸಿ ನಾನು ನೋವಿನಿಂದ ಕಿರುಚುತ್ತಾ, 'ಮೇಡಂ ಆ ಹಲ್ಲಲ್ಲ' ಎಂದು ಪದೇ ಪದೇ ಹೇಳಿದರೂ ನನ್ನ ಮಾತನ್ನು ಕೇಳಿಸಿಕೊಳ್ಳದೆ ಬೇರೆ ಹಲ್ಲನ್ನೇ ಕಿತ್ತುಹಾಕಿದರು" ಎಂದು ಶಬಾನಾ ಕಣ್ಣೀರಿಟ್ಟಿದ್ದಾರೆ.

ಈ ಎಡವಟ್ಟು ಮಾತ್ರವಲ್ಲದೆ, ಇದೇ ಆಸ್ಪತ್ರೆಯಲ್ಲಿ ಎರಡು ತಿಂಗಳ ಹಿಂದೆ ತಮಗೆ ಮತ್ತೊಂದು ಹಲ್ಲು ಕಿತ್ತಾಗ ಅರವಳಿಕೆ (Anesthesia) ಇಂಜೆಕ್ಷನ್ ನೀಡದೆಯೇ ಹಲ್ಲು ಕಿತ್ತು ಕ್ರೂರವಾಗಿ ವರ್ತಿಸಿದ್ದರು ಎಂದು ಶಬಾನಾ ಗಂಭೀರ ಆರೋಪ ಮಾಡಿದ್ದಾರೆ. ತಪ್ಪು ಹಲ್ಲು ಕಿತ್ತಿದ್ದನ್ನು ಪ್ರಶ್ನಿಸಲು ಹೋದಾಗ ಆಸ್ಪತ್ರೆಯ ಸಿಬ್ಬಂದಿ ರೋಗಿಯ ಕುಟುಂಬದವರೊಂದಿಗೆ ಅತ್ಯಂತ ಉದ್ಧಟತನದಿಂದ ನಡೆದುಕೊಂಡಿದ್ದು, ಇದು ಆಸ್ಪತ್ರೆ ಆವರಣದಲ್ಲಿ ದೊಡ್ಡ ಹೈಡ್ರಾಮಾಕ್ಕೆ ಕಾರಣವಾಯಿತು. ಘಟನೆಯನ್ನು ನೋಡಲು ನೂರಾರು ರೋಗಿಗಳು ಸ್ಥಳದಲ್ಲಿ ಜಮಾಯಿಸಿದ್ದರು.

ಬಲಿಪಶು ಶಬಾನಾ ಖಾನ್ ಅವರು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅರವಿಂದ್ ಖರೆ ಅವರಿಗೆ ಲಿಖಿತ ದೂರನ್ನು ಸಲ್ಲಿಸಿದ್ದು, ನಿರ್ಲಕ್ಷ್ಯ ವಹಿಸಿದ ಮಹಿಳಾ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ಡಾ. ಅಮಿತ್ ಯಾದವ್, "ಮಹಿಳಾ ವೈದ್ಯರ ವಿರುದ್ಧ ತಪ್ಪು ಹಲ್ಲು ಕಿತ್ತಿರುವ ಮತ್ತು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ದೂರು ಬಂದಿರುವುದು ನಿಜ. ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

24/05/2026 08:10 pm

Cinque Terre

17.23 K

Cinque Terre

0

ಸಂಬಂಧಿತ ಸುದ್ದಿ