ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀನಗರ: ಕೇಬಲ್‌ ಕಾರ್‌ನಲ್ಲಿ ತಾಂತ್ರಿಕ ದೋಷ : ಆಗಸದಲ್ಲೇ 300 ಜನ ಪ್ರವಾಸಿಗರ ಪರದಾಟ

ಶ್ರೀನಗರ: ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿ ಕೇಬಲ್‌ ಕಾರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸುಮಾರು 300 ಪ್ರವಾಸಿಗರು ಆಗಸದಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆ, ಸೇನೆ, ಪೊಲೀಸ್ ಮತ್ತು ಸ್ಥಳೀಯಾಡಳಿತವು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.

'ಗೊಂಡೊಲಾ' ಎಂದು ಕರೆಯಲ್ಪಡುವ ಈ ಕೇಬಲ್ ಕಾರ್ ಸೇವೆಯು ತಾಂತ್ರಿಕ ದೋಷದಿಂದಾಗಿ ಅನಿರೀಕ್ಷಿತವಾಗಿ ಸ್ಥಗಿತಗೊಂಡಿತು. ಇದರಿಂದಾಗಿ ಕ್ಯಾಬಿನ್‌ಗಳೊಳಗಿದ್ದ ಪ್ರವಾಸಿಗರು ಸಿಲುಕಿಕೊಂಡರು. ಕೆಲಕಾಲ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ದೊಡ್ಡ ದುರಂತ ಸಂಭವಿಸಿಲ್ಲ.

ವಿದೇಶಿ ಮತ್ತು ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ಸುಮಾರು 300ರಷ್ಟು ಪ್ರವಾಸಿಗರು ಕೇಬಲ್‌ ಕಾರ್‌ನಲ್ಲಿ ಸಿಲುಕಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ, ಸೇನೆಯ 9 ರಾಜ್ ರಿಫ್ ಬೆಟಾಲಿಯನ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದವು. ತಂಗ್‌ಮಾರ್ಗ್‌ನ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ತಹಶೀಲ್ದಾರ್ ಅವರು ಈ ರಕ್ಷಣಾ ಪ್ರಯತ್ನಗಳ ಮೇಲ್ವಿಚಾರಣೆ ನಡೆಸಿದರು. "ಗೊಂಡೊಲಾ ಅನಿರೀಕ್ಷಿತವಾಗಿ ನಿಂತಿದ್ದಲ್ಲದೆ ಮುಂದಕ್ಕೆ ಚಲಿಸದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಹಿಳೆಯರು, ಮಕ್ಕಳು ಸೇರಿ ಹಲವು ಪ್ರವಾಸಿಗರು ಭಯಭೀತರಾಗಿರುವುದು ಕಂಡುಬಂತು" ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿವೆ.

"ತಾಂತ್ರಿಕ ದೋಷದಿಂದ ಕೇಬಲ್‌ ಕಾರ್‌ ಸ್ಥಗಿತಗೊಂಡಿರುವುದು ದೃಢಪಟ್ಟಿದೆ. ಮಾಹಿತಿ ತಿಳಿದ ತಕ್ಷಣವೇ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಸಿಲುಕಿಕೊಂಡಿದ್ದ ಪ್ರವಾಸಿಗರ ಸುರಕ್ಷಿತ ರಕ್ಷಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಾಂತ್ರಿಕ ಪರಿಣಿತರು ಸಮಸ್ಯೆಯನ್ನು ಪತ್ತೆ ಹಚ್ಚಲು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಶೀಘ್ರದಲ್ಲೇ ಕೇಬಲ್ ಕಾರ್ ಸೇವೆ ಪುನರಾರಂಭವಾಗುವ ನಿರೀಕ್ಷೆಯಿದೆ.

Edited By :
PublicNext

PublicNext

25/05/2026 09:15 pm

Cinque Terre

9.11 K

Cinque Terre

0

ಸಂಬಂಧಿತ ಸುದ್ದಿ