ಭಟ್ಕಳ: ತಾಲ್ಲೂಕಿನ ಶಿರಾಲಿಯ ತಟ್ಟಿಹಕ್ಲು ಸಮೀಪ ಕಳಿನಕಟ್ಟೆ ನದಿಯಲ್ಲಿ ಭಾನುವಾರ ಬೆಳಿಗ್ಗೆ ಚಿಪ್ಪೆಕಲ್ಲು ತೆಗೆಯಲು ಹೋಗಿದ್ದ 14 ಜನರಲ್ಲಿ 10 ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರಲ್ಲಿ ಅಸ್ವಸ್ಥಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ರವಾನೆ ಮಾಡಲಾಗಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಓರ್ವನ ಶವ ಪತ್ತೆಯಾಗಿ ಹುಡುಕಾಟ ಮುಂದುವರೆದಿದೆ.
ಶಿರಾಲಿಯ ಸಾರದಹೊಳೆ ನಿವಾಸಿಗಳಾದ ಲಕ್ಷ್ಮೀ ಮಾದೇವ ನಾಯ್ಕ ಮಳುಮನೆ (38), ಲಕ್ಷ್ಮೀ ಅಣ್ಣಪ್ಪ ನಾಯ್ಕ (44), ಮಾಸ್ತಮ್ಮ ಮಂಜುನಾಥ ನಾಯ್ಕ (43), ಉಮೇಶ್ ಮಂಜುನಾಥ ನಾಯ್ಕ(42), ಲಕ್ಷ್ಮೀ ಶಿವರಾಮ ನಾಯ್ಕ (39), ನಾಗರತ್ನ ಪರಮೇಶ್ವರ ನಾಯ್ಕ (40), , ಮಂಜಮ್ಮ ಗೋಯ್ದ ನಾಯ್ಕ (40), ಲಕ್ಷ್ಮೀ ಮಹಾದೇವ ನಾಯ್ಕ(30) ನದಿಯಲ್ಲಿಯೇ ಮೃತಪಟ್ಟರೆ, ತೀವ್ರ ಅಸ್ವಸ್ಥ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜ್ಯೋತಿ ನಾಗಪ್ಪ ನಾಯ್ಕ (37), ಮಾಲತಿ ಜಟ್ಟಪ್ಪ ನಾಯ್ಕ (38), ಮುರುಡೇಶ್ವರದ ಆರ್ ಎನ್ ಎಸ್ ಆಸ್ಪತ್ರೆಯಲ್ಲಿ ನಿಧನರಾದರು. ನಾಪತ್ತೆಯಾದ ಮಾದೇವ ಜಟ್ಟಪ್ಪ ನಾಯ್ಕ(52) ಇನ್ನೂ ಪತ್ತೆಯಾಗದ ಕಾರಣ ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ಮೀನುಗಾರರಿಂದ ಹುಡುಕಾಟ ಮುಂದುವರೆದಿದೆ. ನೀರು ಕುಡಿದು ಅಸ್ವಸ್ಥರಾದ ನಾಗರತ್ನ ಈಶ್ವರ ನಾಯ್ಕ ಹಾಗೂ ಮಾದೇವಿ ನಾಯ್ಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಜನರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿ ಶವವನ್ನು ಕಂಡು ಕಂಬನಿ ಮಿಡಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಅಪರ ಜಿಲ್ಲಾಧಿಕಾರಿ ಸಾಜಿದ ಮುಲ್ಲ, ಉತ್ತರ ಕನ್ನಡ ಎಸ್ಪಿ ಎಂ ದೀಪನ್, ಭಟ್ಕಳ ಉಪವಿಭಾಗಾಧಿಕಾರಿ ಜೆ ಮಹೇಶ, ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಮಾಜಿ ಶಾಸಕ ಸುನೀಲ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ತಲುಪಿದ್ದ ಸಚಿವ ಮಂಕಾಳ ವೈದ್ಯ ಅವರು ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಿಂದ ವಾಪಾಸಾಗಿ ರಾತ್ರಿ ಭಟ್ಕಳಕ್ಕೆ ಮರಳಿ ಬಂದು ಕುಟುಂಬದವರಿಗೆ ಸಾಂತ್ವನ ಹೇಳಿದರು.
PublicNext
24/05/2026 08:56 pm