ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ ಎಂಬ ನೆಪವೊಡ್ಡಿ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ 'ಬೆಲೆ ಏರಿಕೆ' ಧೋರಣೆ ತೀವ್ರ ಖಂಡನೀಯ ಎಂದು ಸಚಿವ ಎಂಬಿ ಪಾಟೀಲ ಕಿಡಿಕಾರಿದ್ದಾರೆ.
ಕಚ್ಚಾತೈಲದ ಬೆಲೆ ಜಾಗತಿಕವಾಗಿ ಇಳಿದಾಗ ಜನಸಾಮಾನ್ಯರಿಗೆ ಯಾವುದೇ ಲಾಭ ನೀಡದೆ, ಏರಿಕೆಯಾದಾಗ ಮಾತ್ರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ಜನವಿರೋಧಿ ಧೋರಣೆ ಖಂಡನೀಯವಾಗಿದೆ ಎಂದಿದ್ದಾರೆ.
ಹೌದು ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕುಸಿದಿದ್ದಾಗ ಅದರ ಲಾಭದಲ್ಲಿ ನಯಾಪೈಸೆಯಷ್ಟೂ ಜನಸಾಮಾನ್ಯರಿಗೆ ನೀಡದ ಸರ್ಕಾರ, ಈಗ ಬೆಲೆ ಏರಿಕೆಯಾಗಿದೆ ಎಂದು ಜನರ ಮೇಲೆ ಗದಾಪ್ರಹಾರ ಮಾಡುತ್ತಿರುವುದು ಅಕ್ಷಮ್ಯ ಅನ್ಯಾಯ. ಇದು ಸರ್ಕಾರದ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.
ಮೇ 15ರಿಂದ ಇಂದಿನವರೆಗೆ ₹8ರಷ್ಟು ಇಂಧನ ದರ ಹೆಚ್ಚಳವಾಗಿದೆ. ಕೇವಲ ಹತ್ತು ದಿನಗಳಲ್ಲಿ 4ನೇ ಬಾರಿ ದರ ಪರಿಷ್ಕರಣೆ ನಡೆಸಿ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಸುಮ್ಮನಿದ್ದ ಕೇಂದ್ರ ಸರ್ಕಾರ, ಈಗ ಜನಸಾಮಾನ್ಯರ ಮೇಲೆ 'ಬೆಲೆ ಏರಿಕೆ' ಎಂಬ ದಾಳಿ ನಡೆಸುತ್ತಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದು ಕೇವಲ ವಾಹನ ಸವಾರರ ಸಮಸ್ಯೆಯಷ್ಟೇ ಅಲ್ಲ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾದರೆ ಸಾರಿಗೆ ವೆಚ್ಚ ಹೆಚ್ಚಾಗಿ, ತರಕಾರಿ, ದಿನಸಿ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೆಯೂ ಗಗನಕ್ಕೇರುವುದು ನಿಶ್ಚಿತ. ಇದು ಸಾಮಾನ್ಯ ಜನರ ದಿನನಿತ್ಯದ ಬದುಕನ್ನು ಮತ್ತಷ್ಟು ದುಸ್ತರಗೊಳಿಸುತ್ತದೆ.
ಜನರ ದಿನನಿತ್ಯದ ಬದುಕನ್ನೇ ಸಂಕಷ್ಟಕ್ಕೆ ದೂಡುತ್ತಿರುವ ಈ ಜನವಿರೋಧಿ ಇಂಧನ ದರ ಏರಿಕೆಯನ್ನು ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಬಡವರ ಹೊಟ್ಟೆಯ ಮೇಲೆ ಹೊಡೆಯುವುದನ್ನು ನಿಲ್ಲಿಸಿ, ಜನಸಾಮಾನ್ಯರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
PublicNext
25/05/2026 06:35 pm