ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ ಶಾಸಕ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಹಕ್ಕೊತ್ತಾಯ: ಹೈಕಮಾಂಡ್‌ಗೆ ಅಭಿಮಾನಿಗಳಿಂದ ಪತ್ರ !

ಸಾಗರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಾಯಕತ್ವ ಬದಲಾವಣೆ ಬೆನ್ನಲ್ಲೇ, ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಅವರ ಅಭಿಮಾನಿಗಳು ಹಾಗೂ ಮಲೆನಾಡಿನ ಸಾರ್ವಜನಿಕರು ಕಾಂಗ್ರೆಸ್ ಹೈಕಮಾಂಡ್‌ಗೆ ಬಲವಾದ ಹಕ್ಕೊತ್ತಾಯ ಪತ್ರ ಬರೆದಿದ್ದಾರೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಉದ್ದೇಶಿಸಿ ಬರೆದಿರುವ ಈ ಪತ್ರದಲ್ಲಿ, ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗೆ ಬೇಳೂರು ಅವರ ನಾಯಕತ್ವ ಅತ್ಯಗತ್ಯ ಎಂದು ಪ್ರತಿಪಾದಿಸಲಾಗಿದೆ.

ಮಲೆನಾಡು ಭಾಗದ ರೈತರ ಜ್ವಲಂತ ಸಮಸ್ಯೆಗಳಾದ ಶರಾವತಿ ಹಿನ್ನೀರು ಸಂತ್ರಸ್ತರ ಪುನರ್ವಸತಿ ಮತ್ತು ಬಗರ್ ಹುಕುಂ ಬೇಸಾಯದ ಸಕ್ರಮಗೊಳಿಸುವಿಕೆ ಮುಂತಾದ ವಿಷಯಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಂಪುಟದಲ್ಲಿ ಮಲೆನಾಡಿನ ನಾಡಿಮಿಡಿತ ಬಲ್ಲ ಸಮರ್ಥ ನಾಯಕರ ಅಗತ್ಯವಿದೆ ಎಂದು ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಗೋಪಾಲಕೃಷ್ಣ ಬೇಳೂರು ಅವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ, ಇಡೀ ಶಿವಮೊಗ್ಗ ಜಿಲ್ಲಾದ್ಯಂತ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ ಧೀಮಂತ ನಾಯಕರಾಗಿದ್ದಾರೆ. ಅವರ ಸರಳತೆ, ಜನಸ್ನೇಹಿ ವ್ಯಕ್ತಿತ್ವ ಹಾಗೂ ಶೋಷಿತರು, ರೈತರು ಮತ್ತು ಯುವಕರ ಪರವಾಗಿ ಅವರು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿರುವುದು ಮಲೆನಾಡಿನ ಪ್ರತಿಯೊಂದು ಮನೆಯಲ್ಲೂ ಗೌರವ ತಂದುಕೊಟ್ಟಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಪಕ್ಷದ ಏಳುಬೀಳುಗಳ ಎಲ್ಲಾ ಸಂದರ್ಭದಲ್ಲೂ ಹೈಕಮಾಂಡ್ ಮತ್ತು ರಾಜ್ಯ ನಾಯಕರ ತೀರ್ಮಾನಗಳಿಗೆ ಬದ್ಧರಾಗಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಪ್ರಾತಿನಿಧ್ಯ ಕಲ್ಪಿಸಿದಂತಾಗುತ್ತದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಸರ್ವ ಜನಾಂಗದವರನ್ನು ಜೊತೆಯಲ್ಲಿ ಕೊಂಡೊಯ್ಯುವ ಅದ್ಭುತ ನಾಯಕತ್ವದ ಗುಣ ಹೊಂದಿರುವ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ವರಿಷ್ಠರು ಈ ನ್ಯಾಯಸಮ್ಮತ ಕೋರಿಕೆಯನ್ನು ಪುರಸ್ಕರಿಸಲಿದ್ದಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Edited By : PublicNext Desk
PublicNext

PublicNext

30/05/2026 05:06 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ