ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ವ್ಯಾನಿಟಿ ಬ್ಯಾಗ್ ಕತ್ತರಿಸಿ 2 ಲಕ್ಷ ಮೌಲ್ಯದ ಚಿನ್ನದ ಸರ ಕಳವು

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಕತ್ತರಿಸಿ ಸುಮಾರು 2 ಲಕ್ಷ ಮೌಲ್ಯದ ಚಿನ್ನದ ಮುತ್ತಿನ ಸರವನ್ನು ಕಳವು ಮಾಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಕೈಮರ ಜಂಕ್ಷನ್ ಬಳಿ ನಡೆದಿದೆ.

ಕಟಗಾರು ಗ್ರಾಮದ ಪ್ರೇಮಾ ಭೋಜರಾಜ್ ಸರವನ್ನು ಕಳೆದುಕೊಂಡ ಮಹಿಳೆಯಾಗಿದ್ದಾರೆ. ತೀರ್ಥಹಳ್ಳಿ ಬಸ್ ನಿಲ್ದಾಣದಿಂದ ಮೂಡಬಿದಿರೆಯಲ್ಲಿರುವ ತಮ್ಮ ತವರು ಮನೆಗೆ ತೆರಳಲು ಅವರು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಬಸ್‌ನಲ್ಲಿ ಆಸನ ಲಭ್ಯವಿಲ್ಲದ ಕಾರಣ ನಿಂತುಕೊಂಡೇ ಪ್ರಯಾಣಿಸುತ್ತಿದ್ದ ವೇಳೆ, ಇಬ್ಬರು ಅಪರಿಚಿತ ಮಹಿಳೆಯರು ತಮ್ಮ ಪಕ್ಕದಲ್ಲಿ ಜಾಗ ನೀಡಿ ಕೂರಿಸಿಕೊಂಡಿದ್ದರು ಎನ್ನಲಾಗಿದೆ.

ಸ್ವಲ್ಪ ಸಮಯದ ಬಳಿಕ ಆ ಮಹಿಳೆಯರು, ನಿಮ್ಮ ಕುತ್ತಿಗೆಯಲ್ಲಿರುವ ಸರ ತುಂಡಾಗಿದೆ, ಅದನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದರು. ಅದರಂತೆ ಪ್ರೇಮಾ ಅವರು 56 ಗ್ರಾಂ ತೂಕದ ಲಕ್ಷ್ಮೀ ಪೆಂಡೆಂಟ್ ಹೊಂದಿದ್ದ ಚಿನ್ನದ ಮುತ್ತಿನ ಸರವನ್ನು ಕುತ್ತಿಗೆಯಿಂದ ತೆಗೆದು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು.

ಬಳಿಕ ಪ್ರಯಾಣದ ವೇಳೆ ನಿದ್ರೆಗೆ ಜಾರಿದ್ದ ಅವರು, ಬಸ್ ಕೈಮರ ಜಂಕ್ಷನ್ ತಲುಪಿದಾಗ ಎಚ್ಚರಗೊಂಡಿದ್ದಾರೆ. ಆಗ ವ್ಯಾನಿಟಿ ಬ್ಯಾಗ್‌ನ ಒಂದು ಬದಿಯನ್ನು ಕತ್ತರಿಸಿ, ಜಿಪ್ ತೆರೆಯುವ ಮೂಲಕ ಒಳಗಿದ್ದ ಚಿನ್ನದ ಸರವನ್ನು ಕಳ್ಳರು ಎಗರಿಸಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪ್ರೇಮಾ ಭೋಜರಾಜ್ ಅವರು ನೀಡಿದ ದೂರಿನ ಆಧಾರದ ಮೇಲೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : PublicNext Desk
PublicNext

PublicNext

31/05/2026 09:10 am

Cinque Terre

3.85 K

Cinque Terre

0