ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ‘ಕನಕಪುರ ಬಂಡೆ’ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿ ಗದ್ದುಗೆ ಏರಲು ಸಜ್ಜಾಗಿದ್ದಾರೆ.
ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ADR) ಪ್ರಕಟಿಸಿರುವ ಜನಪ್ರತಿನಿಧಿಗಳ ಆಸ್ತಿ ವಿವರಗಳ ಹೊಸ ವಿಶ್ಲೇಷಣಾತ್ಮಕ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ರಾಜಕೀಯ ನಾಯಕರ ಚುನಾವಣಾ ಅಫಿಡವಿಟ್‌ಗಳನ್ನು ಆಧರಿಸಿ ಸಿದ್ಧಪಡಿಸಲಾದ ಈ ವರದಿಯ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ದೇಶದ ಇತರೆಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗಿಂತ ಅತಿ ಹೆಚ್ಚು ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಲಿದ್ದಾರೆ.
ಆ ಮೂಲಕ ದಕ್ಷಿಣ ಭಾರತದ ಪ್ರಭಾವಿ ನಾಯಕರಾದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಅವರನ್ನೂ ಡಿಕೆಶಿ ಹಿಂದಿಕ್ಕಿದ್ದಾರೆ.
ಡಿ.ಕೆ. ಶಿವಕುಮಾರ್ ಕರ್ನಾಟಕ ₹ 1,413 ಕೋಟಿ ರೂಪಾಯಿ, ಎನ್. ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ₹ 931 ಕೋಟಿ,
ಸಿ. ಜೋಸೆಫ್ ವಿಜಯ್ ತಮಿಳುನಾಡು ₹ 648 ಕೋಟಿ.
ಬೆಳೆಯುತ್ತಲೇ ಹೋದ ಆಸ್ತಿ ಸಾಮ್ರಾಜ್ಯ!
ಡಿ.ಕೆ. ಶಿವಕುಮಾರ್ ಅವರ ಒಟ್ಟು ₹1,413 ಕೋಟಿ ರೂಪಾಯಿ ಆಸ್ತಿಯಲ್ಲಿ ₹1,140 ಕೋಟಿ ಸ್ಥಿರ ಆಸ್ತಿ ಹಾಗೂ ₹273 ಕೋಟಿ ಚರ ಆಸ್ತಿ ಸೇರಿದೆ. ಜೊತೆಗೆ ₹265 ಕೋಟಿ ಸಾಲವನ್ನೂ ಅವರು ಘೋಷಿಸಿಕೊಂಡಿದ್ದಾರೆ. 2008ರಲ್ಲಿ ₹75.5 ಕೋಟಿ ಆಸ್ತಿ ಹೊಂದಿದ್ದ ಡಿಕೆಶಿ, 2013ರಲ್ಲಿ ₹251 ಕೋಟಿ, 2018ರಲ್ಲಿ ₹840 ಕೋಟಿ ಹಾಗೂ ಪ್ರಸ್ತುತ ₹1,413 ಕೋಟಿಗೆ ತಮ್ಮ ಆಸ್ತಿ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ.
ಬೆಂಗಳೂರು, ಮೈಸೂರು, ದೆಹಲಿ ಹಾಗೂ ಕನಕಪುರದಲ್ಲಿರುವ ಭೂಮಿಯ ಮೌಲ್ಯ ಹೆಚ್ಚಳ ಮತ್ತು ಪರಂಪರಾಗತವಾಗಿ ಬಂದ ಆಸ್ತಿಗಳು ಇವರ ಶ್ರೀಮಂತಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.
ದಕ್ಷಿಣದವರೇ 'ಕಲಿ'ಗಳು
ವಿಶೇಷವೆಂದರೆ, ಎಡಿಆರ್ ವರದಿಯ ಪ್ರಕಾರ ದೇಶದ ಟಾಪ್ 3 ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳು ದಕ್ಷಿಣ ಭಾರತದ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ಹಿಂದೆ ಚಂದ್ರಬಾಬು ನಾಯ್ಡು ದೇಶದ ಅತಿ ಶ್ರೀಮಂತ ಸಿಎಂ ಆಗಿ ಗುರುತಿಸಿಕೊಂಡಿದ್ದರು. ಆದರೆ, ಕರ್ನಾಟಕದ ರಾಜಕೀಯ ಸಮೀಕರಣಗಳ ಬದಲಾವಣೆಯೊಂದಿಗೆ ಡಿ.ಕೆ. ಶಿವಕುಮಾರ್ ಅವರು ನೂತನ ಸಿಎಂ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಈಗ ಕರ್ನಾಟಕದ ಪಾಲಾಗಲಿದೆ.
PublicNext
31/05/2026 10:33 pm