ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮನ ಮೂಕಸಮ್ಮತಿ, ಮಲತಂದೆಯ ಕ್ರೌರ್ಯಕ್ಕೆ ಮಗು ಬಲಿ.. ಅಮ್ಮಾ... ನಂದೇನು ತಪ್ಪಿತ್ತಮ್ಮ?

ಹೆಣ್ಣನ್ನ ಕರುಣೆಯ ಕಡಲು ಅಂತಾರೆ... ಹೆತ್ತ ಕರುಳನ್ನ ದೇವರಿಗಿಂತ ಮಿಗಿಲು ಅಂತಾರೆ. ಆದರೆ ಕೇರಳದಲ್ಲಿ ನಡೆದ ಘಟನೆ 'ಅಮ್ಮ' ಅನ್ನೋ ಪವಿತ್ರ ಪದದ ಮೇಲೆಯೇ ಅಸಹ್ಯ ಹುಟ್ಟುವಂತೆ ಮಾಡಿದೆ.

ಹೌದು ತಿರುವನಂತಪುರಂನ ಉಪನಗರ ನಡುಮಂಗಾಡ್‌ನಲ್ಲಿ ಒಂದೂವರೆ ವರ್ಷದ ಮಗು ಅರ್ಷಿದ್ ಗಂಟಲಲ್ಲಿ ಆಹಾರ ಸಿಲುಕಿ ಸತ್ತಿದೆ ಎಂದು ಬಿಂಬಿಸಲಾದ ಪ್ರಕರಣ ಭೀಕರ ಕೊಲೆಯೆಂದು ಬಯಲಾಗಿದೆ. ಮಲತಂದೆ ಅಷ್ಕರ್ ಹಲ್ಲೆ ನಡೆಸಿ ಕೊಂದಿದ್ದು, ತಾಯಿ ಅಖಿಲಾ ಮೂಕಪ್ರೇಕ್ಷಕಳಾಗಿದ್ದಳು.

ಅಖಿಲಾ ಮಗುವಿಗೆ ಜನ್ಮ ನೀಡುವ ಕೆಲವೇ ತಿಂಗಳ ಮುನ್ನ, ಸುಮಾರು ಎರಡು ವರ್ಷಗಳ ಹಿಂದೆ ಅರ್ಷಿದ್‌ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಅಖಿಲಾ ವಾಹನ ಚಾಲಕನಾಗಿದ್ದ ಅಷ್ಕರ್ ನೊಂದಿಗೆ ವಾಸಿಸುತ್ತಿದ್ದಳು. ಆದ್ರೆ ಅಖಿಲಾ ಮತ್ತು ಅಷ್ಕರ್‌ ಕಾಮದಾಟಕ್ಕೆ ಈ ಪುಟ್ಟ ಕಂದ ಅರ್ಷಿದ್ ಅಡ್ಡಿಯಾಗಿದ್ದಾನೆ ಎಂದು ಪ್ರಪಂಚದ ಅರಿವೇ ಇಲ್ಲದ ಆ ಕಂದನಿಗೆ ನರಕ ತೋರಿಸಿ ಸಾಯಿಸಿದ್ದು ಮಾತ್ರ ಅಮಾನುಷ್ಯವಾಗಿದೆ.

ನಿತ್ಯವೂ ಆ ಮಗುವಿನ ಮೇಲೆ ಕ್ರೌರ್ಯದ ನರ್ತನ ನಡೀತಿತ್ತು. ಆ ಪುಟ್ಟ ಶರೀರದ ಮೇಲೆ ಬರೋಬ್ಬರಿ 50 ಕ್ಕೂ ಹೆಚ್ಚು ಗಾಯದ ಗುರುತುಗಳಿವೆ. ಸಿಗರೇಟ್‌ನಿಂದ ಸುಟ್ಟ ಬರೆಗಳಿವೆ ಅಬ್ಬಾ... ನೆನೆಸಿಕೊಂಡರೆನೇ ಮೈ ನಡುಗುತ್ತೆ. ಎರಡು ದಿನಗಳ ಹಿಂದೆ ಆ ಕಂದಮ್ಮ ಕೊನೆಗೂ ಕೊನೆಯುಸಿರೆಳೆದಿದೆ.

ಸಾಯಿಸುವ ಮುನ್ನವೂ ಆ ರಾಕ್ಷಸರು ಕಂದನ ಬಾಯಿಗೆ ನುಂಗಲು ಅಸಾಧ್ಯವಾಗುವಷ್ಟು ಅನ್ನ ತುಂಬಿ ಕೊಂದು ಹಾಕಿದ್ದಾರೆ.ಇನ್ನೂ ಮಗು ಮನೆಯಲ್ಲಿಯೇ ಸಾಯುತ್ತಿದ್ದಂತೆ ವೈದ್ಯರ ಬಳಿ ಬಂದು ಊಟ ಗಂಟಲಿಗೆ ಸಿಕ್ಕಿಕೊಂಡು ಉಸಿರು ನಿಂತಿದೆ ಎಂದು ಪಾಪಿಗಳು ಕಥೆ ಕಟ್ಟಿದ್ದಾರೆ. ಆದ್ರೆ ವೈದ್ಯರು ಆ ಮಗುವಿನ ದೇಹ ನೋಡಿ ಕಣ್ಣೀರು ಹಾಕಿದ್ದಾರೆ ಎಂದರೆ ಆ ಪಾಪಿಗಳು ಮಗುವಿಗೆ ಎಷ್ಟು ನರಕ ತೋರಿಸಿರಬೇಡ?

ಮಗು ಕೊಲೆಯಾಗುವ ಎರಡು ವಾರಗಳ ಹಿಂದೆ ಬಸ್ ನಿಲ್ದಾಣವೊಂದರಲ್ಲಿ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಮಗುವಿನ ಎರಡು ಕೈಗಳು ಮುರಿದುಹೋಗಿರುವ ಬಗ್ಗೆ ಪ್ರಶ್ನಿಸಿದಾಗ "ಮಗು ಸೈಕಲ್‌ನಿಂದ ಬಿದ್ದು ಕೈ ಮುರಿದುಕೊಂಡಿದೆ ಎಂದು ತಾಯಿ ಅಖಿಲಾ ಸುಳ್ಳು ಹೇಳಿರುವ ವಿಡಿಯೋ ವೈರಲ್‌ ಆಗಿದೆ. ಆದ್ರೆ ಆ ಕೈಗಳು ಬಿದ್ದು ಮುರಿದಿದ್ದಲ್ಲ ಬದಲಿಗೆ ಈ ಪಾಪಿಗಳು ಮುರಿದು ಹಾಕಿದ್ದು.

ಮಗು ಸಾವಿನ ಬಗ್ಗೆ ಆತನ ಹತ್ತಿರದ ಸಂಬಂಧಿಕರು ತೀವ್ರ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದ ನಂತರ ನಡೆಸಿದ ಶವಪರೀಕ್ಷೆ ವರದಿಯು ವೈದ್ಯರನ್ನೇ ಬೆಚ್ಚಿಬೀಳಿಸಿದೆ. ಮಗುವಿನ ಸಾವು ನಿರಂತರವಾಗಿ ಮಾಡಿದ ಭೀಕರ ಹಲ್ಲೆಯಿಂದಾದ ಆಂತರಿಕ ರಕ್ತಸ್ರಾವದಿಂದ ಸಂಭವಿಸಿದೆ ಎಂದು ವರದಿ ಬಹಿರಂಗಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅಷ್ಕರ್‌ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಈ ವೇಳೆ ಮಗುವಿಗೆ ಹೊಡೆಯಲು ಬಳಸಿದ್ದ ಕೋಲು ಮತ್ತು ಬರೆ ಎಳೆಯಲು ಬಳಸಿದ್ದ ಲೈಟರ್ ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಪಾಪಿ ಅಷ್ಕರ್ ಮಗು ಜೋರಾಗಿ ಕಿರುಚಾಡಬಾರದು ಎಂದು ಪ್ರತಿದಿನ ಆತನ ಬಾಯಿಗೆ ಬಟ್ಟೆ ತುರುಕುತ್ತಿದ್ದೆ, ಹಲ್ಲೆ ನಡೆಸಿದ ವಸ್ತುಗಳನ್ನು ಕಾಲುವೆಗೆ ಎಸೆದು, ಉಳಿದಿದ್ದನ್ನು ಸುಟ್ಟುಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇತ್ತ ಪಾಪಿ ತಾಯಿಯೂ ಕೂಡ ಪೊಲೀಸರ ಮುಂದೆ ತನ್ನ ಪ್ರೇಮಿ ತನ್ನ ಮಗನಿಗೆ ಕೈಯಿಂದ ಮತ್ತು ಕೋಲುಗಳಿಂದ ಹೊಡೆಯುತ್ತಿದ್ದ ತಾನು ಕಣ್ಣಾರೆ ಕಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ತನ್ನ ಮಗುವಿನ ಮೇಲಿನ ದೌರ್ಜನ್ಯ ತಡೆಯಲು ತಾನು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಹೇಳಿರುವುದು ಹೆತ್ತ ಕರುಳಿನ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಸದ್ಯ ಬದುಕಲು ಯೋಗ್ಯರಲ್ಲದ ಈ ಪಾಪಿಗಳು ಜೈಲು ಪಾಲಾಗಿದ್ದಾರೆ. ಏನೋ ಅರಿಯದ ಕಂದ ಮಣ್ಣಲ್ಲಿ ಮಣ್ಣಾಗಿದೆ..

ನಿರ್ಮಲಾ ಅರಳಿಕಟ್ಟಿ ನ್ಯೂಸ್‌ ಡೆಸ್ಕ್‌ ಪಬ್ಲಿಕ್‌ ನೆಕ್ಸ್ಟ್‌ ಹುಬ್ಬಳ್ಳಿ

Edited By : Shivu K
PublicNext

PublicNext

02/06/2026 07:35 pm

Cinque Terre

11.8 K

Cinque Terre

6

ಸಂಬಂಧಿತ ಸುದ್ದಿ