ಬೆಂಗಳೂರು : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿಕೆ ಶಿವಕುಮಾರ್ ಅವರು ತಮ್ಮ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಆರು ಮಹತ್ವದ ಯೋಜನೆಗಳನ್ನು ಘೋಷಿಸುವ ಮೂಲಕ ಹೊಸ ಸರ್ಕಾರ ತನ್ನ ಆಡಳಿತಕ್ಕೆ ಚಾಲನೆ ನೀಡಿದೆ.
ಪ್ರಮುಖ ಘೋಷಣೆಗಳು
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ 'ಪ್ರೈವೇಟ್ ಎಂಪ್ಲಾಯ್ಮೆಂಟ್ ಎಕ್ಸ್‌ಚೇಂಜ್ ಸೆಂಟರ್' ಸ್ಥಾಪನೆ, ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಅನುದಾನ, 2,500 ಚದರ ಅಡಿವರೆಗಿನ ಕಟ್ಟಡಗಳಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ವಿನಾಯಿತಿ, ಹಾಗೂ ಪ್ರತಿ ಪಂಚಾಯತ್‌ಗೂ 'ಭಾರತ್ ಜೋಡೋ ಯುವಕ ಸಂಘ' ಸ್ಥಾಪನೆಗೆ 10 ಸಾವಿರ ರೂ. ನೆರವು ಈ ಘೋಷಣೆಗಳಲ್ಲಿ ಸೇರಿವೆ. ಅಷ್ಟೇ ಅಲ್ಲದೆ, ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಡಿಕೆಶಿ ಘೋಷಿಸಿದರು.
ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ನಿರ್ಧಾರವು, ಬೇರೆ ಊರುಗಳಿಗೆ ತೆರಳಿ ವ್ಯಾಸಂಗ ಮಾಡುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಅನುಕೂಲ ಒದಗಿಸಲಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, "ಶುಭ ಗಳಿಗೆ, ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೆ. ಇಂದು ಸಂಜೆ 4.15ಕ್ಕೆ ಆ ಶುಭ ಗಳಿಗೆ ಬಂದಿದೆ. ಇದು ಹೊಸ ದಿನ, ಹೊಸ ಕೆಲಸ, ಹೊಸ ಅವಕಾಶಗಳನ್ನು ಆರಂಭಿಸುವ ದಿನ" ಎಂದರು. ರಾಜ್ಯದ ಅಭಿವೃದ್ಧಿಗೆ ಬದ್ಧನಾಗಿರುವುದಾಗಿ ಹೇಳಿದ ಅವರು, ಕಳೆದ ಆರು ತಿಂಗಳಿಂದ ರೈತರು, ಕಾರ್ಮಿಕರು, ಮತ್ತು ಎಲ್ಲಾ ವರ್ಗದ ಜನರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿರುವುದಾಗಿ ತಿಳಿಸಿದರು. ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಮಹತ್ವದ ಕಾರ್ಯಕ್ರಮಗಳ ಘೋಷಣೆಯ ಸುಳಿವು ನೀಡಿದೆ.
ತಮ್ಮ ಮೇಲೆ ರಾಜ್ಯದ ಜನತೆ ಅಪಾರ ವಿಶ್ವಾಸವಿಟ್ಟಿದ್ದಾರೆ ಎಂದ ಡಿಕೆಶಿ, ತಮ್ಮ ರಾಜಕೀಯ ಜೀವನದಲ್ಲಿ ಟೀಕೆಗಳು, ರಾಜಕೀಯ ತಂತ್ರಗಳು, ತಿಹಾರ್ ಜೈಲು ವಾಸದಂತಹ ಕಷ್ಟಗಳನ್ನು ಎದುರಿಸಿರುವುದನ್ನು ಸ್ಮರಿಸಿದರು. "ಈ ಮುಖ್ಯಮಂತ್ರಿ ಕುರ್ಚಿ ನನ್ನದಲ್ಲ, ಇದು ನಾಡಿನ ಜನತೆಯದ್ದು. ಹೈಕಮಾಂಡ್ ನಾಯಕರು ನನಗೆ ಈ ಅವಕಾಶ ನೀಡಿದ್ದಾರೆ. ಸ್ವಲ್ಪ ತಡವಾದರೂ ಶುಭ ಗಳಿಗೆ ಬಂದಿದ್ದು, ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ" ಎಂದು ಹೇಳಿದರು. ನಮ್ಮ ಸಂಪುಟ 'ಸರ್ವ ಜನಾಂಗದ ಶಾಂತಿಯ ತೋಟ'ದಂತಿದೆ ಎಂದು ಬಣ್ಣಿಸಿದರು.
ಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿದಂತೆ, ವರಿಷ್ಠರ ಸೂಚನೆ ಮೇರೆಗೆ ಸ್ಥಾನವನ್ನು ನನಗೆ ಬಿಟ್ಟುಕೊಟ್ಟಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಮುಂದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರ ನನ್ನ ವೈಯಕ್ತಿಕ ನಿರ್ಧಾರವಾಗಿರುವುದಿಲ್ಲ, ಬದಲಾಗಿ ಇಡೀ ಸಂಪುಟದ ಸಾಮೂಹಿಕ ನಿರ್ಧಾರವಾಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ಇಂದು 14 ಜನ ಸಚಿವರು ಸಂಪುಟಕ್ಕೆ ಸೇರಿದ್ದು, ಇದು 'ಸರ್ವ ಜನಾಂಗದ ಶಾಂತಿಯ ತೋಟ'ವನ್ನು ಬಿಂಬಿಸುತ್ತಿದೆ. ರಾಜ್ಯದಲ್ಲಿ ಉತ್ತಮ ಮತ್ತು ಬಲಿಷ್ಠ ನಾಯಕತ್ವವನ್ನು ನೀಡಿ ಕೆಲಸ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
PublicNext
03/06/2026 10:49 pm