ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕ್ರಿಯೇಟಿವ್ ಡಿಸೈನ್ - ಫ್ಯಾಶನ್ ಶೋದಲ್ಲಿ ಎಲ್ಲರ ಮನಗೆದ್ದ ಸನೋಬರ್

ಧಾರವಾಡ: ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದೇ ಇರುತ್ತದೆ. ಕ್ರೀಡೆ, ಅಡುಗೆ ತಯಾರಿ, ಕಸೂತಿ, ಕ್ವಿಜ್ ಕಾಂಪಿಟೇಶನ್ ಹೀಗೆ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದೇ ಇರುತ್ತದೆ. ಇದೇ ರೀತಿ ಕ್ರಿಯೇಟಿವ್ ಡಿಸೈನಿಂಗ್‌ನಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯೋರ್ವಳು ಇದೀಗ ಅದರಲ್ಲಿ ವಿಶಿಷ್ಟ ಸಾಧನೆ ಮಾಡಿ ಎಲ್ಲರ ಗಮನಸೆಳೆದಿದ್ದಾಳೆ.

ಹೌದು! ಹೀಗೆ ವಿಭಿನ್ನ ಶೈಲಿಯ ಉಡುಗೆ ತೊಟ್ಟು ಬಳ್ಳಿಯಂತೆ ಬಳುಕುತ್ತ ಬರುತ್ತಿರುವ ಈ ವಿದ್ಯಾರ್ಥಿನಿಯವರು ಧಾರವಾಡದ ಫಸ್ಟ್ ಗ್ರೇಡ್ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯರು. ವಿದ್ಯಾರ್ಥಿ ದೆಸೆಯಲ್ಲೇ ಇವರು ಮಾಡೆಲ್‌ಗಳಾಗಿ ಬದಲಾಗಿದ್ದಾರೆ. ಇವರಿಗೆ ಆ ಆಸಕ್ತಿ ಬೆಳೆಯುವಂತೆ ಮಾಡಿದ್ದೇ ಇದೇ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸನೋಬರ್ ಎಂಬ ವಿದ್ಯಾರ್ಥಿನಿ.

ಸನೋಬರ್ ಎಂಬ ವಿದ್ಯಾರ್ಥಿನಿಗೆ ಮೊದಲಿನಿಂದಲೂ ಕ್ರಿಯೇಟಿವ್ ಡಿಸೈನಿಂಗ್ ಮಾಡುವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ. ಆ ಕಾರಣಕ್ಕಾಗಿಯೇ ಇವರು ಧಾರವಾಡದ ಫಸ್ಟ್ ಗ್ರೇಡ್ ವುಮೆನ್ಸ್ ಕಾಲೇಜಿನಲ್ಲಿ ಬಿಎಸ್‌ಸಿ ಫ್ಯಾಶನ್ ಟೆಕ್ನಾಲಜಿ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೇ ಅಂತರರಾಷ್ಟ್ರೀಯ ಮಟ್ಟದ ಮಾಡೆಲ್‌ಗಳು ಧರಿಸುವ ರೀತಿಯಲ್ಲೇ ಉಡುಗೆಯನ್ನು ಸಿದ್ಧಪಡಿಸಿ ಮಾಡೆಲ್‌ಗಳನ್ನೂ ತಾವೇ ಆಯ್ಕೆ ಮಾಡಿಕೊಂಡು ಅವರು ಫ್ಯಾಶನ್ ಶೋದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆಯುವಂತೆ ಮಾಡಿದ್ದಾರೆ.

ಲೋಟಸ್, ಡಹಾಲಿಯಾ ಸೇರಿದಂತೆ ಇತ್ಯಾದಿ ಹೂವಿನ ಆಕಾರದಲ್ಲಿ ಮಾಡೆಲ್‌ಗಳಿಗೆ ಸನೋಬರ್ ಉಡುಪುಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಆ ಉಡುಗೆಗೆ ತಕ್ಕಂತೆಯೇ ಮಾಡೆಲ್‌ಗಳು ರ್‍ಯಾಂಪ್ ವಾಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಾಲೇಜಿನಲ್ಲಿ ಕೊಡಲಾಗಿದ್ದ ಟಾಸ್ಕ್ ಪೂರ್ಣ ಮಾಡಿ ಪ್ರಶಸ್ತಿ ಬಾಚಿದ್ದ ಸನೋಬರ್ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದಿದ್ದ ಫ್ಯಾಶನ್ ಶೋದಲ್ಲಿ ತಮ್ಮ ತಂಡದೊಂದಿಗೆ ಪಾಲ್ಗೊಂಡು ಪ್ರಶಸ್ತಿಗೆ ಮುತ್ತಿಕ್ಕಿದ್ದಲ್ಲದೇ ಅತ್ಯುತ್ತಮ ಡಿಸೈನರ್ ಎಂಬ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಇನ್ನು ಡಿಸೈನರ್ ರೆಡಿ ಮಾಡಿಕೊಟ್ಟ ಉಡುಪುಗಳನ್ನು ಧರಿಸುವುದಷ್ಟೇ ಅಲ್ಲ. ಮಾಡೆಲ್‌ಗಳೂ ಕೂಡ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಆ ಉಡುಪಿಗೆ ಗೌರವ ತಂದು ಕೊಡಬೇಕಾಗುತ್ತದೆ. ಅದೇ ರೀತಿ ಲಕ್ಷ್ಮೀ, ಶ್ರುತಿ, ಪಾರ್ವತಿ ಸೇರಿದಂತೆ ಆರು ಜನ ವಿದ್ಯಾರ್ಥಿನಿಯರು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆಯುವುದರ ಜೊತೆಗೆ ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಣಿಯಾಗಿದ್ದಾರೆ.

ಒಟ್ಟಾರೆ ಎಲ್ಲ ಉಡುಪುಗಳನ್ನು ತಾವೇ ಡಿಸೈನ್ ಮಾಡಿ ಅವುಗಳನ್ನು ಕೈಯಿಂದಲೇ ಸನೋಬರ್ ಅವರು ಸಿದ್ಧಪಡಿಸಿದ್ದಾರೆ. ಸದ್ಯಕ್ಕೆ ಸನೋಬರ್ ಅವರಿಗೆ ವೇದಿಕೆ ಸಿಕ್ಕಿದ್ದು, ಮುಂದೆ ಫ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಸನೋಬರ್ ಅವರಿಗೆ ಒಳ್ಳೆಯ ಅವಕಾಶಗಳು ಸಿಕ್ಕು ಅವರು ಉತ್ತಮ ಹೆಸರು ಸಂಪಾದಿಸುವಂತಾಗಲಿ ಎಂಬುದೇ ಎಲ್ಲರ ಆಶಯ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/06/2026 10:12 pm

Cinque Terre

43.93 K

Cinque Terre

0