ನವದೆಹಲಿ: ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ವೇಗದ ಮತ್ತು ತೊಂದರೆರಹಿತ ಅನುಭವ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್–ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ’ (FTI-TTP) ದೇಶಾದ್ಯಂತ ಜನಪ್ರಿಯತೆ ಗಳಿಸುತ್ತಿದೆ.
ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ವಲಸೆ ಪ್ರಕ್ರಿಯೆಯನ್ನು ಸಂಪೂರ್ಣ ಕಾಗದರಹಿತ ಹಾಗೂ ಅತ್ಯಂತ ವೇಗವಾಗಿ ಪೂರ್ಣಗೊಳಿಸಲು ನೆರವಾಗುತ್ತಿದೆ. ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಈ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ಗೃಹ ಸಚಿವಾಲಯ ಆರಂಭಿಸಿರುವ ಇ-ಗೇಟ್ ವ್ಯವಸ್ಥೆಯಿಂದ ಇಮಿಗ್ರೇಷನ್ ಪ್ರಕ್ರಿಯೆ ಅತ್ಯಂತ ಸುಗಮವಾಗಿದೆ. ಆಗಾಗ್ಗೆ ಪ್ರಯಾಣಿಸುವ ನನಗೆ ದೀರ್ಘ ಸರತಿ ಸಾಲಿನ ತೊಂದರೆ ತಪ್ಪಿದ್ದು, ಸಮಯವೂ ಉಳಿಯುತ್ತಿದೆ” ಎಂದು ಹೇಳಿದ್ದಾರೆ.
ಪ್ರಸ್ತುತ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ 13 ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನೋಂದಾಯಿತ ಪ್ರಯಾಣಿಕರು ಇ-ಗೇಟ್‌ನಲ್ಲಿ ಬೋರ್ಡಿಂಗ್ ಪಾಸ್ ಮತ್ತು ಪಾಸ್‌ಪೋರ್ಟ್ ಸ್ಕ್ಯಾನ್ ಮಾಡಿ, ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸಿದರೆ ಸಾಕು. ಭಾರತೀಯ ನಾಗರಿಕರು ಹಾಗೂ OCI ಕಾರ್ಡ್ ಹೊಂದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ನೋಂದಣಿ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ವಿಮಾನ ನಿಲ್ದಾಣಗಳಲ್ಲಿ ಕಾಯುವ ಸಮಯ ಕಡಿಮೆ ಮಾಡಿ, ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಿರುವ ಈ ಯೋಜನೆ ಡಿಜಿಟಲ್ ಭಾರತದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
PublicNext
09/06/2026 04:57 pm
LOADING...