ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮನುಷ್ಯರಿಗೇ ಪಾಠ ಕಲಿಸುವಂತಿದೆ ಈ ಪ್ರೀತಿ - ನಾಯಿ ಮರಿಯನ್ನು ಎತ್ತಿಕೊಂಡು ಮರ ಹತ್ತಿದ ಕೋತಿ

ಶಿಮ್ಲಾ: ಪ್ರಾಣಿ ಪ್ರಪಂಚದಲ್ಲಿ ಅಪರೂಪದ ಸ್ನೇಹ, ಮಮತೆಯ ದೃಶ್ಯಗಳು ಆಗಾಗ ಮುನ್ನೆಲೆಗೆ ಬರುತ್ತಿರುತ್ತವೆ. ಅಂತಹದ್ದೇ ಒಂದು ಅಪರೂಪದ ಮತ್ತು ಮನಮಿಡಿಯುವ ಘಟನೆಯೊಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೇವಲ್ಸಾರ್ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ರಸ್ತೆಯ ಬದಿಯಲ್ಲಿದ್ದ ಮುದ್ದಾದ ಬೀದಿನಾಯಿ ಮರಿಯೊಂದನ್ನು ಕೊಂಡೊಯ್ದ ಕೋತಿಯೊಂದು, ಸುಮಾರು 20 ಅಡಿ ಎತ್ತರದ ಮರವನ್ನೇರಿದೆ. ಕೋತಿ ನಾಯಿಮರಿಯನ್ನು ಎತ್ತಿಕೊಂಡು ಮರ ಹತ್ತಿದ್ದನ್ನು ನೋಡಿದ ಸ್ಥಳೀಯರು, ಎಲ್ಲಿ ಅದು ಮರಿಯನ್ನು ಕೆಳಗೆ ಹಾಕಿಬಿಡುತ್ತದೋ ಎಂದು ಭಯಗೊಂಡು ಮರದ ಸುತ್ತಲೂ ಜಮಾಯಿಸಿದ್ದರು. ಆದರೆ, ಜನರ ಆತಂಕವನ್ನು ಸುಳ್ಳು ಮಾಡಿದ ಆ ಕೋತಿ, ತನ್ನದೇ ಸ್ವಂತ ಮಗುವನ್ನು ಸಾಕುವಂತೆ ಆ ನಾಯಿಮರಿಯನ್ನು ಎದೆಗೆ ಅಪ್ಪಿಕೊಂಡು, ಸವರುತ್ತಾ ಪ್ರೀತಿ ತೋರಿಸಲು ಆರಂಭಿಸಿದೆ. ಸುಮಾರು 10 ರಿಂದ 15 ನಿಮಿಷಗಳ ಕಾಲ ಮರದ ಮೇಲೆಯೇ ಕುಳಿತು ನಾಯಿಮರಿಯನ್ನು ಮುದ್ದಾಡಿದ ಕೋತಿ, ಆ ಬಳಿಕ ಮೆಲ್ಲನೆ ಕೆಳಗಿಳಿದು ಯಾವುದೇ ತೊಂದರೆ ಮಾಡದೇ ನಾಯಿಮರಿಯನ್ನು ಸುರಕ್ಷಿತವಾಗಿ ನೆಲದ ಮೇಲೆ ಬಿಟ್ಟು ಹೋಗಿದೆ.

ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಸಖತ್ ಸೌಂಡ್ ಮಾಡುತ್ತಿದೆ. ವಿಭಿನ್ನ ಪ್ರಭೇದದ ಪ್ರಾಣಿಗಳ ನಡುವಿನ ಈ ಅತಿ ಅಪರೂಪದ ಪ್ರೀತಿಯನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಈ ಕೋತಿ ಹೆಣ್ಣಾಗಿರಬಹುದು, ಹಾಗಾಗಿ ಅದರಲ್ಲಿ ಮಾತೃತ್ವದ ಭಾವನೆ ಜಾಗೃತಗೊಂಡು ನಾಯಿಮರಿಯನ್ನು ಅಷ್ಟು ಜೋಪಾನವಾಗಿ ನೋಡಿಕೊಂಡಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆ ಒಂದೆಡೆ ಖುಷಿ ತಂದಿದ್ದರೂ, ಸ್ಥಳೀಯರಲ್ಲಿ ಒಂದು ಸಣ್ಣ ಮಟ್ಟದ ಆತಂಕವನ್ನೂ ಸೃಷ್ಟಿಸಿದೆ. ಕೋತಿಗಳು ಇದೇ ರೀತಿ ಸಣ್ಣ ಮಕ್ಕಳನ್ನೂ ಎತ್ತಿಕೊಂಡು ಹೋಗಬಹುದೇ? ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಆರಂಭವಾಗಿವೆ. ಆದರೆ, ಈ ಬಗ್ಗೆ ಮಾತನಾಡಿರುವ ಪರಿಸರವಾದಿ ನರೇಂದ್ರ ಸೈನಿ ಅವರು, "ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಪ್ರಾಣಿ ಪ್ರಪಂಚದಲ್ಲಿ ಇಂತಹ ಘಟನೆಗಳು ಸಾಮಾನ್ಯ. ಕೋತಿಗಳು ಕೆಲವೊಮ್ಮೆ ಇತರ ಪ್ರಾಣಿಗಳ ಮರಿಗಳ ಮೇಲೆಯೂ ಮಮತೆ ತೋರಿಸುತ್ತವೆ. ಹಾಗಾಗಿ ಈ ವೈರಲ್ ವಿಡಿಯೋ ನೋಡಿ ಯಾರೂ ಗಾಬರಿಗೊಳ್ಳಬೇಡಿ" ಎಂದು ಮನವಿ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

09/06/2026 09:10 pm

Cinque Terre

76.05 K

Cinque Terre

0

ಸಂಬಂಧಿತ ಸುದ್ದಿ