ಹಾಸನ: ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರವಾಸಿ ತಾಣವಾದ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಹೋಗಿದ್ದ ಬೆಂಗಳೂರು ಮೂಲದ ಮೂವರು ಯುವಕರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ನೇಹಿತರ ಕಣ್ಣೆದುರೇ ಬೆಂಗಳೂರು ಮೂಲದ ಮೂವರು ಯುವಕರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ. ಹಾಸನ ತಾಲೂಕಿನ ಗೊರೂರು ಬಳಿಯ ಹೇಮಾವತಿ ಜಲಾಶಯದಲ್ಲಿ ಈ ಕರುಣಾಜನಕ ಘಟನೆ ನಡೆದಿದ್ದು, ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ಹತ್ತು ಜನ ಯುವಕರ ತಂಡವೊಂದು ಧರ್ಮಸ್ಥಳ ಪ್ರವಾಸಕ್ಕೆ ತೆರಳಿತ್ತು. ಶ್ರೀಕ್ಷೇತ್ರದ ದರ್ಶನ ಮುಗಿಸಿ ವಾಪಸ್ ಬರುವಾಗ, ಹಾಸನ ತಾಲೂಕಿನ ಗೊರೂರು ಬಳಿಯಿರುವ ಪ್ರಸಿದ್ಧ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದಾರೆ. ಈ ವೇಳೆ ಚರ್ಚ್ ಬಳಿ ಇದ್ದ ಹಿನ್ನೀರನ್ನು ಕಂಡು ಖುಷಿಯಿಂದ ಈಜಲು ಮುಂದಾಗಿದ್ದಾರೆ. ಆದರೆ, ಈಜು ಬಾರದಿದ್ದರೂ ಯುವಕರು ಹಿನ್ನೀರಿಗೆ ಇಳಿದಿರುವುದೇ ಈ ಭೀಕರ ದುರಂತಕ್ಕೆ ಕಾರಣವಾಗಿದೆ. ಮೃತ ದುರ್ದೈವಿಗಳನ್ನು ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಎಂದು ಗುರುತಿಸಲಾಗಿದೆ.
ಮೂವರು ಯುವಕರು ನೀರಿನಲ್ಲಿ ಮುಳುಗುತ್ತಿದ್ದಂತೆ ಆತಂಕಗೊಂಡ ಉಳಿದ ಸ್ನೇಹಿತರು, ರಕ್ಷಿಸುವಂತೆ ದಡಕ್ಕೆ ಬಂದು ಜೋರಾಗಿ ಕಿರುಚಾಡಿದ್ದಾರೆ. ಆದರೆ ಸಕಾಲಕ್ಕೆ ಯಾವುದೇ ನೆರವು ಸಿಗದ ಕಾರಣ, ಸ್ನೇಹಿತರ ಕಣ್ಣೆದುರೇ ಮೂವರು ಯುವಕರು ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿದ್ದಾರೆ. ಘಟನಾ ಸ್ಥಳಕ್ಕೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಮೃತದೇಹಗಳನ್ನು ಹೊರತೆಗೆಯಲು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಜತೆಗಿದ್ದ ಗೆಳೆಯರನ್ನು ಕಣ್ಣೆದುರೇ ಕಳೆದುಕೊಂಡ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
14/06/2026 08:38 pm