ಉತ್ತರ ಪ್ರದೇಶದ ಲಕ್ನೋದಲ್ಲಿ ನಾಚಿಕೆಗೇಡಿನ ಘಟನೆಯೊಂದು ಬೆಳಕಿಗೆ ಬಂದಿದೆ. ವಯಸ್ಸಾದ ಕಾಲದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ 60 ವರ್ಷದ ವೃದ್ಧನೊಬ್ಬ, ಮೆಡಿಕಲ್ ಸ್ಟೋರ್‌ನಲ್ಲಿ ಔಷಧಿಗಳನ್ನು ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಗೋಮತಿ ನಗರದ ಪ್ರಸಿದ್ಧ 'ಓಪನ್ ಏರ್ ರೆಸ್ಟೋರೆಂಟ್' ಪಕ್ಕದಲ್ಲೇ ಇರುವ ಮೆಡಿಕಲ್ ಸ್ಟೋರ್‌ನಲ್ಲಿ ನಡೆದ ಈ ಘಟನೆ, ವೃದ್ಧನ ಕೃತ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಗೋಮತಿ ನಗರದ ಈ ಮೆಡಿಕಲ್ ಸ್ಟೋರ್ ಅನ್ನು ವಿಕಲಚೇತನ ಸೂಪರ್‌ವೈಸರ್ ಒಬ್ಬರು ನಿರ್ವಹಿಸುತ್ತಿದ್ದರು. ತಮ್ಮ ದೈಹಿಕ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ 60 ವರ್ಷದ ವೃದ್ಧನೊಬ್ಬ, ಯಾರಿಗೂ ಅನುಮಾನ ಬಾರದಂತೆ ಸೂಪರ್‌ವೈಸರ್ ಇತರ ಗ್ರಾಹಕರಿಗೆ ಔಷಧಿ ನೀಡುವಲ್ಲಿ ನಿರತರಾಗಿದ್ದಾಗ, ಈ ವೃದ್ಧ ಮೆಡಿಕಲ್ ಕೌಂಟರ್‌ನಲ್ಲಿದ್ದ ದುಬಾರಿ ಬೆಲೆಯ ಔಷಧಿಗಳನ್ನು ಕದ್ದು ತನ್ನ ಜೇಬಿಗೆ ಇಳಿಸಿಕೊಳ್ಳಲು ಯತ್ನಿಸಿದ್ದಾನೆ.
ವೃದ್ಧ ಕಳ್ಳ ತಾನು ವಿಕಲಚೇತನ ಸೂಪರ್‌ವೈಸರ್ ಕಣ್ಣಿಗೆ ಮಣ್ಣೆರಚಬಹುದು ಎಂದುಕೊಂಡಿದ್ದ. ಆದರೆ, ದೈಹಿಕ ಅಸಹಾಯಕತೆ ಇದ್ದರೂ, ಅತ್ಯಂತ ಚುರುಕಾಗಿದ್ದ ಸೂಪರ್‌ವೈಸರ್, ವೃದ್ಧನ ಪ್ರತಿಯೊಂದು ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ವೃದ್ಧ ಔಷಧಿಗಳನ್ನು ಕದ್ದು ಜೇಬಿಗೆ ಹಾಕಿಕೊಳ್ಳುತ್ತಿದ್ದಂತೆ, ಸೂಪರ್‌ವೈಸರ್ ತಕ್ಷಣವೇ ಎಚ್ಚೆತ್ತುಕೊಂಡು, ಅಲ್ಲಿನ ಇತರ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಾಯದಿಂದ ಆತನನ್ನು ಜಾಗದಲ್ಲೇ ತಡೆದು ನಿಲ್ಲಿಸಿದ್ದಾರೆ. ತಕ್ಷಣ ಆತನ ಜೇಬನ್ನು ತಪಾಸಣೆ ಮಾಡಿದಾಗ ಕದ್ದಿದ್ದ ಔಷಧಿಗಳು ಪತ್ತೆಯಾಗಿ, ವೃದ್ಧನ ಕಳ್ಳತನ ಜಗಜ್ಜಾಹೀರಾಗಿದೆ. ಸ್ಥಳೀಯರು ತಕ್ಷಣವೇ ಗೋಮತಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ವೃದ್ಧನನ್ನು ವಶಕ್ಕೆ ಪಡೆದಿದ್ದಾರೆ.
"ವಿಕಲಚೇತನರು ಎಂಬ ಕಾರಣಕ್ಕೆ ಅಂಗಡಿಯ ಉಸ್ತುವಾರಿಯನ್ನು ಕೀಳಾಗಿ ಕಂಡು ಕಳ್ಳತನಕ್ಕೆ ಯತ್ನಿಸಿದ ವೃದ್ಧನ ನಡೆ ನಿಜಕ್ಕೂ ಖಂಡನೀಯ" ಎಂದು ಅಲ್ಲಿ ನೆರೆದಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
09/06/2026 06:33 pm