ಬೆಂಗಳೂರು : ಜೆಡಿಎಸ್ ಕಾರ್ಯಕರ್ತನ ಮೇಲೆ ನಡೆದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪ್ರಕರಣದ ಎರಡನೇ ಆರೋಪಿ ಶಿವಕುಮಾರ್, ತಮ್ಮನ್ನು ಮಾಫಿ ಸಾಕ್ಷಿಯಾಗಿ (ಅಪ್ರೂವರ್) ಪರಿಗಣಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದು ಸೂರಜ್ ರೇವಣ್ಣಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ, ತಮ್ಮ ವಿರುದ್ಧದ ಪ್ರಕರಣದಿಂದ ಕೈಬಿಡುವಂತೆ ಸೂರಜ್ ರೇವಣ್ಣ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು.
ಮಾಫಿ ಸಾಕ್ಷಿ ಅರ್ಜಿಯ ವಿಚಾರಣೆ
ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಎರಡನೇ ಆರೋಪಿ ಶಿವಕುಮಾರ್, ತಾವು ಮಾಫಿ ಸಾಕ್ಷಿಯಾಗಲು ಅವಕಾಶ ನೀಡುವಂತೆ ಕೋರಿ 42ನೇ ಎಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಶಿವಕುಮಾರ್‌ರವರ ಅರ್ಜಿಗೆ ಸೂರಜ್ ರೇವಣ್ಣ ಪರ ವಕೀಲರು ತೀವ್ರ ಅಕ್ಷೇಪಣೆ ವ್ಯಕ್ತಪಡಿಸಿದರು. ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿದೆ. ಈ ಪ್ರಕರಣ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಾಫಿ ಸಾಕ್ಷಿ ಎಂದರೇನು?
ಕಾನೂನಿನ ಪರಿಭಾಷೆಯಲ್ಲಿ 'ಮಾಫಿ ಸಾಕ್ಷಿ' ಎಂದರೆ 'ಅಪ್ರೂವರ್' ಅಥವಾ 'ಕ್ಷಮಾದಾನ ಪಡೆದ ಸಾಕ್ಷಿ'. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯೊಬ್ಬ, ತನ್ನ ಮೇಲಿನ ಆರೋಪಗಳನ್ನು ಒಪ್ಪಿಕೊಂಡು, ಇತರ ಆರೋಪಿಗಳ ವಿರುದ್ಧ ಸಾಕ್ಷಿ ನುಡಿಯಲು ಸಮ್ಮತಿಸಿದರೆ, ನ್ಯಾಯಾಲಯವು ಆತನಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವ ಅಥವಾ ಆರೋಪದಿಂದ ಮುಕ್ತಿ ನೀಡುವ ಪ್ರಕ್ರಿಯೆ ಇದಾಗಿದೆ.
ಒಂದು ವೇಳೆ ಶಿವಕುಮಾರ್ ಮಾಫಿ ಸಾಕ್ಷಿಯಾಗಿ ತನ್ನ ಮೇಲಿನ ಆರೋಪಗಳನ್ನು ಒಪ್ಪಿಕೊಂಡು ಸೂರಜ್ ರೇವಣ್ಣ ವಿರುದ್ಧ ಸಾಕ್ಷಿ ನುಡಿದರೆ, ಅದು ಸೂರಜ್ ರೇವಣ್ಣಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.
ಪ್ರಕರಣದ ಹಿನ್ನೆಲೆ
ಜೆಡಿಎಸ್ ಕಾರ್ಯಕರ್ತರೊಬ್ಬರು ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಬಗ್ಗೆ 2024ರ ಜೂನ್ 22ರಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು, ಜೂನ್ 23ರಂದು ಸೂರಜ್ ರೇವಣ್ಣ ಅವರನ್ನು ಬಂಧಿಸಿದ್ದರು. ಬಂಧನದ ನಂತರ ಸೂರಜ್ ರೇವಣ್ಣ ಸುಮಾರು ಒಂದು ತಿಂಗಳ ಕಾಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು. ಎಸ್‌ಐಟಿ ತನಿಖೆ ನಡೆಸಿ, ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಉಲ್ಲೇಖಿಸಿ 2025ರ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿತ್ತು.
PublicNext
10/06/2026 01:06 pm