ಬೆಂಗಳೂರು: ಆರು ವರ್ಷಗಳ ಹಳೆಯ ಬಿಟ್‌ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಹಾಗೂ ಯೂತ್ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ನಲಪಾಡ್ ಪಾತ್ರದ ಕುರಿತು ಮಹತ್ವದ ಮಾಹಿತಿ ಬಹಿರಂಗಪಡಿಸಿದೆ.
ಬಿಟ್‌ಕಾಯಿನ್ ಹಗರಣದಲ್ಲಿ ಮೊಹಮ್ಮದ್ ನಲಪಾಡ್ ಕೂಡ ಪಾಲುದಾರನಾಗಿದ್ದು, ಆತನಿಗೂ ಹಣ ಸಂದಾಯವಾಗಿದೆ ಎಂದು ಎಸ್‌ಐಟಿ ತನ್ನ ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಬಿಟ್‌ಕಾಯಿನ್ ಹಗರಣದ ಮಾಸ್ಟರ್‌ಮೈಂಡ್ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ನಲಪಾಡ್ ಸೇರಿದಂತೆ ಇತರರ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಿದೆ. ಹ್ಯಾಕರ್ ಶ್ರೀಕಿ, ಬಿಟ್‌ಕಾಯಿನ್ ನಗದೀಕರಣಕ್ಕಾಗಿ ನಲಪಾಡ್‌ನನ್ನು ಸಂಪರ್ಕಿಸಿದ್ದ ಎಂದು ಚಾರ್ಜ್‌ಶೀಟ್ ಹೇಳಿದೆ.
ಮುಂಬೈ ಮೂಲದ ಸ್ನೇಹಿತರು ಮತ್ತು ಖಂಡೇವಾಲ ಮೂಲಕ ನಲಪಾಡ್ ಹವಾಲಾ ರೂಪದಲ್ಲಿ ಬಿಟ್‌ಕಾಯಿನ್‌ಗಳನ್ನು ನಗದೀಕರಣಗೊಳಿಸಿದ್ದಾನೆ. ಈ ನಗದೀಕರಣ ಪ್ರಕ್ರಿಯೆಯಲ್ಲಿ ನಲಪಾಡ್‌ಗೂ ಕಮಿಷನ್ ರೂಪದಲ್ಲಿ ಹಣ ಸಂದಾಯವಾಗಿರುವುದು ಬೆಳಕಿಗೆ ಬಂದಿದೆ.
ಇಡಿ ತನಿಖೆ ತೀವ್ರ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಕೂಡ ತನಿಖೆ ನಡೆಸುತ್ತಿದ್ದು, ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ನಲಪಾಡ್‌ಗೆ 3ನೇ ನೋಟಿಸ್ ನೀಡಿದೆ. ಈ ಹಿಂದೆ, ಇಡಿ ಈಗಾಗಲೇ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗ್ಡೆ ಅವರನ್ನು 16 ಗಂಟೆಗಳ ಕಾಲ ಸುದೀರ್ಘವಾಗಿ ವಿಚಾರಣೆ ನಡೆಸಿದೆ.
PublicNext
10/06/2026 11:24 am