ನವದೆಹಲಿ : ವಿದೇಶಿ ನೆಲದಲ್ಲಿ ಭಾರತೀಯ ಪ್ರವಾಸಿಗರ ನಡವಳಿಕೆ ಮತ್ತು ನಾಗರಿಕ ಪ್ರಜ್ಞೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ವಿಯೆಟ್ನಾಂ ವಿಮಾನ ನಿಲ್ದಾಣದ ರನ್‌ವೇ (ಟಾರ್ಮ್ಯಾಕ್) ಮೇಲೆ ಭಾರತೀಯ ಟೂರಿಸ್ಟ್ ನೃತ್ಯ ಮಾಡಿದ್ದು ಮತ್ತು ವಿದೇಶಿ ರೆಸ್ಟೋರೆಂಟ್‌ಗಳು ಹಾಗೂ ಪ್ರವಾಸಿ ತಾಣಗಳ ಒಳಗೆ ಗರ್ಬಾ ನೃತ್ಯ ಪ್ರದರ್ಶಿಸಿ ಭಾರಿ ಟೀಕೆಗೆ ಒಳಗಾಗಿದ್ದ ಘಟನೆಗಳು ಮಾಸುವ ಮುನ್ನವೇ, ಈಗ ಮತ್ತೊಂದು ವಿಡಿಯೋ ಮುಂಚೂಣಿಗೆ ಬಂದಿದೆ.
ವಿದೇಶದ ಜನನಿಬಿಡ ನೈಟ್ ಮಾರ್ಕೆಟ್‌ನಲ್ಲಿ ಭಾರತೀಯ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಕೇವಲ ಬಿಳಿ ಟವೆಲ್ ಸುತ್ತಿಕೊಂಡು ನೃತ್ಯ ಮಾಡಿರುವುದು ಜಾಗತಿಕ ಮಟ್ಟದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ಆ ಮಹಿಳೆಯು ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರದ ಜನಪ್ರಿಯ ಬಾಲಿವುಡ್ ಗೀತೆ ‘ಮೇರೆ ಖ್ವಾಬೋನ್ ಮೇ ಜೋ ಆಯೆ’ ಹಾಡಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವಿಶೇಷವೆಂದರೆ, ಆಕೆ ಕೇವಲ ಒಂದು ಬಿಳಿ ಬಣ್ಣದ ಟವೆಲ್ ಅನ್ನು ಮೈಗೆ ಸುತ್ತಿಕೊಂಡು, ಜನದಟ್ಟಣೆಯಿರುವ ರಸ್ತೆಯ ಮಧ್ಯದಲ್ಲೇ ನಿಂತು ನೃತ್ಯ ಮಾಡಿದ್ದಾರೆ. ನೃತ್ಯದ ಭಾಗವಾಗಿ ಆಕೆ ಪದೇ ಪದೇ ತನ್ನ ಮೈ ಮೇಲಿದ್ದ ಆ ಟವೆಲ್ ಅನ್ನು ಸರಿಪಡಿಸಿಕೊಳ್ಳುತ್ತಾ, ಅರೆಬರೆ ಬಟ್ಟೆಯಲ್ಲೇ ಇಡೀ ರಸ್ತೆಯ ಮಧ್ಯೆ ಸಾಗುತ್ತಾ ರೀಲ್ಸ್ ರೆಕಾರ್ಡ್ ಮಾಡಿಕೊಂಡಿದ್ದಾಳೆ.
ಆಕೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಆ ಇಡೀ ಮಾರುಕಟ್ಟೆ ಪ್ರದೇಶವು ಸ್ಥಳೀಯರು ಮತ್ತು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತ್ತು. ರಸ್ತೆಯಲ್ಲಿ ಓಡಾಡುತ್ತಿದ್ದ ಕೆಲವು ಪ್ರವಾಸಿಗರು ಆಕೆಯನ್ನು ನೋಡಿ ಆಶ್ಚರ್ಯದಿಂದ ಅಲ್ಲಿಯೇ ನಿಂತು ವೀಕ್ಷಿಸಿದರೆ, ಇನ್ನು ಕೆಲವರು ಆಕೆ ವಿಡಿಯೋ ಶೂಟ್ ಮಾಡಿಕೊಳ್ಳುತ್ತಿರುವುದನ್ನು ಅರಿತು ಸುಮ್ಮನೆ ಅಲ್ಲಿಂದ ಮುಂದೆ ಸಾಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುತ್ತಿದ್ದಂತೆ, ಸಾವಿರಾರು ಯೂಸರ್‌ಗಳು ಮಹಿಳೆಯ ಈ ವರ್ತನೆಯನ್ನು ಕಟುವಾಗಿ ಟೀಕಿಸಲು ಪ್ರಾರಂಭಿಸಿದ್ದಾರೆ. ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಅಸಭ್ಯ ನಡವಳಿಕೆಯು ಪ್ರವಾಸಿಗರ ಕಳಪೆ ನಾಗರಿಕ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ ಮತ್ತು ಇದು ಒಟ್ಟಾರೆಯಾಗಿ ವಿದೇಶಗಳಲ್ಲಿ ಭಾರತೀಯ ಪ್ರವಾಸಿಗರ ಇಮೇಜ್‌ಗೆ ಭಾರಿ ಧಕ್ಕೆ ತರುತ್ತದೆ ಎಂದು ನೆಟ್ಟಿಗರು ವಾದಿಸಿದ್ದಾರೆ.
'ಇದು ನಿಜಕ್ಕೂ ಅಸಹ್ಯಕರ. ದಯವಿಟ್ಟು ವಿದೇಶಿಯರ ಮುಂದೆ ನಮ್ಮ ದೇಶದ ಜನರ ಮಾನ ಕಳೆಯಬೇಡಿ. ಜಗತ್ತಿನಾದ್ಯಂತ ಈಗಾಗಲೇ ಭಾರತೀಯರ ಮೇಲಿರುವ ಗೌರವ ಮತ್ತು ಭಾವನೆಗಳು ಹದಗೆಡುತ್ತಿವೆ, ದಯವಿಟ್ಟು ಅದನ್ನು ಇನ್ನಷ್ಟು ಹಾಳು ಮಾಡಬೇಡಿ. ಇಂತಹ ಕೆಲವು ಮೂರ್ಖರಿಂದಾಗಿ ಇಡೀ ದೇಶವನ್ನೇ ಅದೇ ದೃಷ್ಟಿಕೋನದಿಂದ ನೋಡುವಂತಾಗುತ್ತದೆ' ಎಂದು ಒಬ್ಬರು ಬರೆದಿದ್ದಾರೆ.
ಕೆಲವರು ಹೆಚ್ಚು ತಟಸ್ಥ ನಿಲುವು ತಳೆದು, 'ಮಾಡಿದ ಕೃತ್ಯವನ್ನು ಟೀಕಿಸಿ, ಅವರ ರಾಷ್ಟ್ರೀಯತೆಯನ್ನಲ್ಲ. ಕಳಪೆ ನಾಗರಿಕ ಪ್ರಜ್ಞೆ ಎಂಬುದು ಒಬ್ಬ ವ್ಯಕ್ತಿಯ ವೈಯಕ್ತಿಕ ವೈಫಲ್ಯವೇ ಹೊರತು, ಅದು ಇಡೀ ದೇಶದ ಗುಣಲಕ್ಷಣವಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
PublicNext
10/06/2026 06:53 pm