ಭಟ್ಕಳ: ಪ್ರಧಾನಿ ನರೇಂದ್ರ ಮೋದಿ ಅವರ ಸುದೀರ್ಘ ಸಾರ್ವಜನಿಕ ಸೇವೆಯ ಹಿನ್ನೆಲೆಯಲ್ಲಿ ಬಿಜೆಪಿ ಭಟ್ಕಳ ಮಂಡಲದ ವತಿಯಿಂದ ನಗರದ ಚನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚುವ ಕಾರ್ಯಕ್ರಮ ನಡೆಯಿತು.
ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ 12 ವರ್ಷ ಹಾಗೂ ಭಾರತದ ಪ್ರಧಾನಿಯಾಗಿ 12 ವರ್ಷ ಸೇವೆ ಸಲ್ಲಿಸಿರುವ ಮೋದಿಜಿ ಅವರು ಚುನಾಯಿತ ಸರ್ಕಾರಿ ಮುಖ್ಯಸ್ಥರಾಗಿ ಸುಮಾರು 25 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ಮೋದಿಜಿಯವರ ರಾಜಕೀಯ ಪಯಣ ಇಂದು ಜಾಗತಿಕ ನಾಯಕತ್ವದ ಮಟ್ಟಕ್ಕೆ ತಲುಪಿರುವುದು ದೇಶದ ಯುವಕರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಬಿ. ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಪಕ್ಷದ ಪ್ರಮುಖ ಕೇದಾರ ಕೊಲ್ಲೆ, ಮಂಡಲ ಉಪಾಧ್ಯಕ್ಷ ಮಂಜಪ್ಪ ನಾಯ್ಕ, ಮಂಡಲ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ್, ಸಾಮಾಜಿಕ ಜಾಲತಾಣ ಸಂಚಾಲಕ ಪಾಂಡುರಂಗ ನಾಯ್ಕ, ಸಂಘಟನೆ ಪ್ರಮುಖ ಜಯಂತ್ ನಾಯ್ಕ ಸೇರಿದಂತೆ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
11/06/2026 11:35 am