ಇಂಫಾಲ್: ಜನಾಂಗೀಯ ಸಂಘರ್ಷಗಳಿಂದ ತತ್ತರಿಸಿರುವ ಮಣಿಪುರದಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಅಪಹರಣಕ್ಕೊಳಗಾಗಿದ್ದ ಆರು ಜನ ನಾಗಾ ಸಮುದಾಯದ ಸದಸ್ಯರ ಮೃತದೇಹಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮೇ 13ರಂದು ಕಾಂಗ್‌ಪೋಕ್ಪಿ ಜಿಲ್ಲೆಯ ಲೀಲೋನ್ ವೈಫೈ ಗ್ರಾಮದಿಂದ ಆರು ನಾಗಾ ಸಮುದಾಯದ ಸದಸ್ಯರನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದರು. ಈ ಘಟನೆ ಬಳಿಕ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಸುಮಾರು 450ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್, ಪೊಲೀಸ್ ಪಡೆ, ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
24 ಗಂಟೆಗಳ ನಿರಂತರ ಶೋಧದ ಬಳಿಕ ಬುಧವಾರ ಮಧ್ಯಾಹ್ನ ಅಪಹರಣಕ್ಕೊಳಗಾಗಿದ್ದವರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಮೃತದೇಹಗಳು ಮೇ 13ರಂದು ನಾಪತ್ತೆಯಾಗಿದ್ದ ನಾಗಾ ಸಮುದಾಯದ ಸದಸ್ಯರದ್ದೇ ಎಂದು ಶಂಕಿಸಲಾಗಿದೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಖೇಮಚಂದ್ ಸಿಂಗ್, ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಈ ಹೇಯ ಕೃತ್ಯವನ್ನು ಸರ್ಕಾರ ಬಲವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಇದೀಗ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಎನ್‌ಐಎ ಕೈಗೆತ್ತಿಕೊಂಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ. ಹತ್ಯೆಗೈದವರನ್ನು ಶೀಘ್ರವೇ ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
PublicNext
11/06/2026 03:46 pm