ಗದಗ: ಗದಗ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿಮೀರಿದ್ದು, ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೇ ಅಟ್ಟಾಡಿಸಿ ಹಲ್ಲೆ ನಡೆಸಿರುವ ಘಟನೆ ಗದಗ ನಗರದ ದೋಬಿ ಘಾಟ್ ಬಳಿ ಗುರುವಾರ ರಾತ್ರಿ ನಡೆದಿದೆ.
ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಅಶೋಕ್ ಪಾಟೀಲ್ ಹಲ್ಲೆಗೊಳಗಾದ ಪೊಲೀಸ್ ಕಾನ್ಸ್‌ಟೇಬಲ್. ಇವರು ಕರ್ತವ್ಯ ಮುಗಿಸಿ ನಗರದಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದಾಗ, ದೋಬಿ ಘಾಟ್ ಬಳಿ ಯುವಕರ ಗುಂಪೊಂದು ಗಲಾಟೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ತಕ್ಷಣವೇ ಜಗಳ ಬಿಡಿಸಲು ಅಶೋಕ್ ಪಾಟೀಲ್ ಮುಂದಾಗಿದ್ದಾರೆ.
ಆದರೆ, ಕಾನೂನಿನ ಭಯವೇ ಇಲ್ಲದಂತೆ ವರ್ತಿಸಿದ ಆ ಪುಂಡರ ಗುಂಪು, ಜಗಳ ಬಿಡಿಸಲು ಬಂದ ಕಾನ್ಸ್‌ಟೇಬಲ್ ಮೇಲೆಯೇ ಮನಬಂದಂತೆ ಮುಗಿಬಿದ್ದಿದೆ. ತೀವ್ರವಾಗಿ ಹಲ್ಲೆ ನಡೆಸಿ, ರಕ್ತ ಬರುವಂತೆ ಅಟ್ಟಾಡಿಸಿ ಹೊಡೆದಿದ್ದಾರೆ.
ಸದ್ಯ ತೀವ್ರವಾಗಿ ಗಾಯಗೊಂಡಿರುವ ಪೊಲೀಸ್ ಕಾನ್ಸ್‌ಟೇಬಲ್ ಅಶೋಕ್ ಪಾಟೀಲ್ ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದೌರ್ಜನ್ಯದ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪುಂಡರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
PublicNext
12/06/2026 04:31 pm
LOADING...