ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಅಕ್ರಮ ಮರಳು ದಂಧೆ - 8 ಹಿಟಾಚಿ ವಶ, ಎಫ್‌ಐಆರ್ ದಾಖಲು

ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಹೆಮ್ಮಡಗಿ ಮತ್ತು ಅಡ್ಡೋಡಗಿ ಗ್ರಾಮಗಳ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಶಾಂತಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಈ ದಾಳಿಯ ವೇಳೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ಎಂಟು ಹಿಟಾಚಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಶಾಂತಪ್ಪ ಅವರು ಸುರಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸೂರ್ಯಕಾಂತ ಮತ್ತು ಬಸವರಾಜ ಅವರೊಂದಿಗೆ ಕೃಷ್ಣಾ ನದಿಗೆ ತೆರಳಿ ಪರಿಶೀಲನೆ ನಡೆಸಿದಾಗ, ಹಿಟಾಚಿ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ.

ಅಧಿಕಾರಿಗಳನ್ನು ಕಂಡ ತಕ್ಷಣ ಹಿಟಾಚಿ ಆಪರೇಟರ್‌ಗಳು ಯಂತ್ರಗಳನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಅಕ್ರಮ ಮರಳು ಮಾಫಿಯಾದಲ್ಲಿ ತೊಡಗಿದ್ದ ವಿವಿಧ ಕಂಪನಿಗಳಿಗೆ ಸೇರಿದ ಒಟ್ಟು ಎಂಟು ಹಿಟಾಚಿ ಯಂತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡಿರುವ ಈ ಯಂತ್ರಗಳ ಅಂದಾಜು ಮೌಲ್ಯ 15 ಲಕ್ಷ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಹಿಟಾಚಿ ಆಪರೇಟರ್‌ಗಳು ಮತ್ತು ಮಾಲೀಕರು ಅನಧಿಕೃತವಾಗಿ ಕೃಷ್ಣಾ ನದಿಯಿಂದ ಮರಳನ್ನು ಗಣಿಗಾರಿಕೆ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಬಯಲಾಗಿದೆ. ಸರ್ಕಾರದ ಸ್ವತ್ತಾಗಿರುವ ನೈಸರ್ಗಿಕ ಮರಳನ್ನು ಗಣಿಗಾರಿಕೆ ಮೂಲಕ ನಾಶಪಡಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಹಿಟಾಚಿ ಯಂತ್ರಗಳ ಮಾಲೀಕರು ಮತ್ತು ಆಪರೇಟರ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Abhishek Kamoji
Kshetra Samachara

Kshetra Samachara

13/06/2026 12:33 pm

Cinque Terre

6.3 K

Cinque Terre

0