ಭಟ್ಕಳ: ಕಾಲೇಜಿನ ಶುಲ್ಕ ಪಾವತಿಸಲು ಅಗತ್ಯವಿದ್ದ ಹಣ ಸಮಯಕ್ಕೆ ವಾಪಸ್ ಸಿಗದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸರಿಗೆ ನೀಡಲಾದ ದೂರಿನ ಪ್ರಕಾರ, ಬೆಳಕೆ ಗ್ರಾಮದ ಕಂಚಿಕೇರಿ ನಿವಾಸಿ ನಾಗರಾಜ ಲಚ್ಚಯ್ಯ ನಾಯ್ಕ ಅವರ ಪುತ್ರಿ ಗಾಯತ್ರಿ ಕಾಲೇಜಿನ ಶುಲ್ಕ ಪಾವತಿಗಾಗಿ ಸಂಗ್ರಹಿಸಿದ್ದ ಹಣವನ್ನು ಪರಿಚಯಸ್ಥ ಜಾಲಿಯ ಸಂತೋಷ ಮಾಧೇದ ನಾಯ್ಕ ಅವರಿಗೆ ನಂತರ ಹಿಂದಿರುಗಿಸುವ ಷರತ್ತಿನೊಂದಿಗೆ ನೀಡಿದ್ದಳು. ಆದರೆ ಹಲವು ಬಾರಿ ಹಣವನ್ನು ವಾಪಸ್ ಕೇಳಿದರೂ ನೀಡದೆ ವಿಳಂಬ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಣ ಸಿಗದ ಪರಿಣಾಮ ಕಾಲೇಜಿನ ಶುಲ್ಕ ಪಾವತಿಯಾಗದೆ ಗಾಯತ್ರಿಗೆ ಹಾಲ್ ಟಿಕೆಟ್ ದೊರೆಯಲಿಲ್ಲ. ಆಕೆ ತೀವ್ರ ಮಾನಸಿಕವಾಗಿ ನೊಂದಿದ್ದಳು ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಗಾಯತ್ರಿ ಮನೆಯಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ವಿವಿಧೆಡೆ ಹುಡುಕಾಟ ನಡೆಸಿದರು. ಬಳಿಕ ಮನೆಯ ಸಮೀಪದ ಖಾಸಗಿ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟೇಶ ಮುರನಾಳ ಹಾಗೂ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿಸಿದರು.
ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
Kshetra Samachara
13/06/2026 02:25 pm