ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಷ್ಯನ್ ಆಟ್ಯಾಪಟ್ಯಾದಲ್ಲಿ ಗದಗದ ಬಂಜಾರ ಯುವಕರ ಚಿನ್ನದ ಸಾಧನೆ

ಗದಗ: ಅಂತರರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಇಬ್ಬರು ಯುವ ಕ್ರೀಡಾಪಟುಗಳು ಸಾಧನೆ ಮೆರೆದಿದ್ದು, ಭೂತಾನ್‌ನಲ್ಲಿ ನಡೆದ ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಾಧಕರಾದ ರಾಹುಲ್ ಶೇಖರ್ ಕಾರಭಾರಿ ಹಾಗೂ ಉಳವೇಶ ಶಿವಾಜಿ ಲಮಾಣಿ ಅವರನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಜಿಲ್ಲಾಡಳಿತ ಭವನದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಜೂನ್ 7 ರಿಂದ 10ರವರೆಗೆ ಭೂತಾನ್‌ನಲ್ಲಿ ನಡೆದ 3ನೇ ಸೀನಿಯರ್ ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದ ಕ್ರೀಡಾಪಟು ರಾಹುಲ್ ಶೇಖರ್ ಕಾರಭಾರಿ ಅವರು ತಮ್ಮ ತಂಡದೊಂದಿಗೆ ಭರ್ಜರಿ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರು. 15 ಆಟಗಾರರನ್ನು ಒಳಗೊಂಡಿದ್ದ ಭಾರತೀಯ ತಂಡವು ಪ್ರತಿಸ್ಪರ್ಧಿಗಳನ್ನು ಮಣಿಸಿ ಪ್ರಶಸ್ತಿ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿತು.

ಅದೇ ರೀತಿ ಜೂನ್ 4 ರಿಂದ 6ರವರೆಗೆ ಭೂತಾನ್‌ನಲ್ಲಿ ನಡೆದ ಪ್ರಥಮ ಜೂನಿಯರ್ (ಅಂಡರ್-19) ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ ತಾಂಡಾದ ಯುವ ಕ್ರೀಡಾಪಟು ಉಳವೇಶ ಶಿವಾಜಿ ಲಮಾಣಿ ಅವರು ಭಾರತೀಯ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿ ತಂಡವನ್ನು ವಿಜಯದತ್ತ ಮುನ್ನಡೆಸಿದರು. ಅವರ ನೇತೃತ್ವದ 15 ಸದಸ್ಯರ ತಂಡ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಜಯಿಸಿತು.

ಜಿಲ್ಲಾಡಳಿತ ಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಇಬ್ಬರು ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗದಗ ಜಿಲ್ಲೆಯ ಹೆಸರು ಬೆಳಗಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಗ್ರಾಮೀಣ ಭಾಗದ ಯುವಕರು ಪರಿಶ್ರಮ ಮತ್ತು ಪ್ರತಿಭೆಯಿಂದ ವಿಶ್ವಮಟ್ಟದ ಸಾಧನೆ ಮಾಡಿರುವುದು ಇತರ ಯುವಕರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಅವರು ದೂರವಾಣಿ ಮೂಲಕ ಕ್ರೀಡಾಪಟುಗಳೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿರುವ ಇವರ ಸಾಧನೆ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಹಾರೈಸಿದರು.

ಭಾರತೀಯ ಆಟ್ಯಾಪಟ್ಯಾ ತಂಡಗಳ ಈ ಸಾಧನೆ ದೇಶದ ಕ್ರೀಡಾ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದ್ದು, ಗದಗ ಜಿಲ್ಲೆಯ ಕ್ರೀಡಾ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ಯಪಡಿಸಿದರು.

ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೊಗೇರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಮನೋಜ್ ರಾಠೋಡ, ಕ್ರೀಡಾ ಸಾಧಕ ಯುವಕರ ಪಾಲಕರು, ಸ್ನೇಹಿತರು, ತರಬೇತುದಾರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

14/06/2026 05:38 pm

Cinque Terre

4.82 K

Cinque Terre

0