ಚಿಕ್ಕಮಗಳೂರು: ಗಿನ್ನೆಸ್ ದಾಖಲೆ ಬರೆಯುವ ಮಹತ್ವಾಕಾಂಕ್ಷೆಯೊಂದಿಗೆ ಕಾಫಿನಾಡಿನಿಂದ ಕಾಶ್ಮೀರದ ಲಡಾಕ್ ವರೆಗೆ ಬೈಕ್ ರ‍್ಯಾಲಿ ಕೈಗೊಂಡಿದ್ದ ಚಿಕ್ಕಮಗಳೂರಿನ ತಂದೆ-ಮಗ ಹಿಮಾಚಲ ಪ್ರದೇಶದ ಕುಳ್ಳು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮುಗಳಿವಳ್ಳಿ ಸಮೀಪದ ಗೋಕುಲ್ ಫಾರ್ಮ್ ನಿವಾಸಿಗಳಾದ ಮಂಜುನಾಥ್ ಹಾಗೂ ಅವರ ಮಗ ಪವನ್ ಕುಮಾರ್ ಬೈಕ್‌ನಲ್ಲಿ ಲಡಾಕ್ ನಿಂದ ವಾಪಸಾಗುತ್ತಿದ್ದಾಗ ಬೈಕ್ ಮೇಲೆ ಮರ ಬಿದ್ದು ದುರಂತ ಸಂಭವಿಸಿದೆ. ಸದ್ಯ ಹಿಮಾಚಲ ಪ್ರದೇಶದ ಕುಳ್ಳು ನಗರದ ಆಸ್ಪತ್ರೆಗೆ ದಾಖಲಾಗಿರುವ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಹಾಸಿಗೆಯಿಂದ ಎದ್ದೇಳಲಾಗದ ಸ್ಥಿತಿಯಲ್ಲಿದ್ದಾರೆ.
ಅಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಸ್ಪಂದನೆ ಸಿಗುತ್ತಿಲ್ಲ, ಜೊತೆಗೆ ಸಂಪರ್ಕ ಕಷ್ಟವಾಗಿದೆ ಎಂದು ಮನೆಯೊಡತಿ ಲಕ್ಷ್ಮಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇಬ್ಬರನ್ನು ತಕ್ಷಣವೇ ಕರೆತರಲು ನೆರವಾಗುವಂತೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಣ್ಣೀರಿನ ಮನವಿ ಸಲ್ಲಿಸಿದ್ದಾರೆ.
ಸಂತ್ರಸ್ತೆಯ ಅಳಲಿಗೆ ಸ್ಪಂದಿಸಿರುವ ಶಾಸಕರು ಹಾಗೂ ಅಧಿಕಾರಿಗಳು, ಅಲ್ಲಿನ ಆಡಳಿತದೊಂದಿಗೆ ಮಾತನಾಡಿ ಅಗತ್ಯ ಚಿಕಿತ್ಸೆ ಮತ್ತು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿ ಇಬ್ಬರನ್ನೂ ತವರಿಗೆ ಮರಳಿ ಕರೆತರಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
PublicNext
18/06/2026 10:46 pm
LOADING...